ಕೋಮು ಶಕ್ತಿಗಳ ವಿರುದ್ಧ ಹೋರಾಟಕ್ಕೆ ಸಂಘಟನೆ ಮುಖ್ಯ

25HSN4
Published on

ಹಾಸನ: ಸ್ವಸ್ಥ ಸಮಾಜಕ್ಕೆ ಧಕ್ಕೆ ತರುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಪ್ರಬಲ ಹೋರಾಟ ಅನಿವಾರ್ಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.

ನಗರದ ಸ್ವಾಭಿಮಾನ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ’ಕ.ದ.ಸಂ.ಸ. ಹುಟ್ಟು-ಬೆಳವಣಿಗೆ ಮತ್ತು ಸವಾಲುಗಳು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಕಳೆದ ಆರು ವರ್ಷದಿಂದ ದೇಶದಲ್ಲಿ ಅಸಮಾನತೆ ಹೆಚ್ಚಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರುದ್ಧ ಕೆಂಡಕಾರುತ್ತಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಡಿನ ಶೋಷಿತರ, ಬಡವರ, ದುರ್ಬಲ ವರ್ಗಗಳ ವಿಮೋಚನೆಗಾಗಿ ಸಾಕಷ್ಟು ಕೆಲಸ ಮಾಡಿದೆ. 1974 ರಲ್ಲಿ ಪ್ರೊ .ಬಿ. ಕೃಷ್ಣಪ್ಪನವರಿಂದ ಸ್ಥಾಪಿಸಲ್ಪಟ್ಟ ಸಮಿತಿ ರಾಜ್ಯಾದ್ಯಂತ ಮನೆ- ಮನಗಳಲ್ಲಿ ನೆಲೆಯೂರಿದೆ. ಅಸ್ಪೃಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ದೌರ್ಜನ್ಯ, ಮೂಢನಂಬಿಕೆ ಹಾಗೂ ಇನ್ನಿತರ ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ, ಪ್ರತಿಭಟನೆ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರ, ಪ್ರಾಣ ಹಾನಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯನ್ನು ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ರೀತಿಯ ಅಮಾನುಷ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ಆರೋಪಿಸಿದರು.

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಪ್ರಜ್ಞಾವಂತ ನಾಗರಿಕರು ಕೋಮುವಾದಿ , ಜನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮೈಕೊಡವಿ ಧ್ವನಿ ಎತ್ತಬೇಕಾಗಿದೆ ಎಂದು ಕರೆಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net