

ಹಾಸನ : ಕರೊನಾ ಲಾಕ್‌ಡೌನ್‌ನಿಂದ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಗುರುವಾರ ಜಿಲ್ಲಾದ್ಯಂತ ಸುಗಮವಾಗಿ ನಡೆಯಿತು.
ಕೋವಿಡ್-19 ಭೀತಿ, ಆಗಾಗ ಸುರಿದ ಸೋನೆ ಮಳೆ, ಮೂರು ತಿಂಗಳ ಸತತ ರಜೆಯ ಗೊಂದಲದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಒಟ್ಟು 16687 ವಿದ್ಯಾರ್ಥಿಗಳ ಪೈಕಿ 555 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು ಮತ್ತು 16132 ಮಕ್ಕಳು ಪರೀಕ್ಷೆ ಬರೆದರು. ಜಿಲ್ಲೆಯ 15759 ಮಕ್ಕಳಲ್ಲಿ 532 ಜನರು ಗೈರಾದರೆ ಹೊರ ಜಿಲ್ಲೆಯ 928 ವಿದ್ಯಾರ್ಥಿಗಳಲ್ಲಿ 20 ಪರೀಕ್ಷಾರ್ಥಿಗಳು ಗೈರಾದರು.
ಅಂತರ ಪಾಲನೆಗೆ ಹರಸಾಹಸ: ಬೆಳಗ್ಗೆ 8.30ರಿಂದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತಂಡೋಪಾದಿಯಲ್ಲಿ ಬಂದ ಕಾರಣ ಎಲ್ಲರಿಗೂ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಆರೋಗ್ಯ ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು.
ಸ್ಕ್ರೀನಿಂಗ್‌ಗಾಗಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿದ್ದ ವೇಳೆ ಪರಸ್ಪರ ಅಂತರ ಪಾಲನೆಯಾಗಲಿಲ್ಲ. ಆಗ ಎಚ್ಚೆತ್ತುಕೊಂಡ ಉಪನ್ಯಾಸಕರು ಮೈಕ್ ಮೂಲಕ ಅರಿವು ಮೂಡಿಸಿದರು. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಹುಡುಕಲು ಪರದಾಡಿದರು.
ನಿರ್ಬಂಧಿತ ವಲಯದ ವಿದ್ಯಾರ್ಥಿಗಳಿಲ್ಲ: ಜಿಲ್ಲಾದ್ಯಂತ 20 ನಿರ್ಬಂಧಿತ ವಲಯಗಳನ್ನು ಗುರುತಿಸಲಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಯಾವ ವಿದ್ಯಾರ್ಥಿಯೂ ಆ ಪ್ರದೇಶದಿಂದ ಬಂದಿಲ್ಲ ಎಂಬುದು ಶಿಕ್ಷಣ ಇಲಾಖೆಗೆ ನೆಮ್ಮದಿ ತರಿಸಿತ್ತು.
ಕೆಎಸ್‌ಆರ್‌ಟಿಸಿ ಬಸ್: ಪರೀಕ್ಷಾರ್ಥಿಗಳಿಗಾಗಿ ಜಿಲ್ಲಾಡಳಿತ ಕಲ್ಪಿಸಿದ್ದ ವಿಶೇಷ ಬಸ್‌ಗಳಿಗೆ ವಿದ್ಯಾರ್ಥಿಗಳು ಹತ್ತಲಿಲ್ಲ. ಜಿಲ್ಲಾದ್ಯಂತ 89 ಪರೀಕ್ಷಾ ಕೇಂದ್ರ ತೆರೆದಿದ್ದು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಹುತೇಕ ವಿದ್ಯಾರ್ಥಿಗಳು ಬೈಕ್, ಕಾರಿನಲ್ಲಿ ಬಂದು ಪರೀಕ್ಷೆಗೆ ಹಾಜರಾದರು.