ಕಂಡವರು ಕಂಡದ್ದನ್ನು ಕೇಳಿ ನಗೆಗಡಲಲ್ಲಿ ತೇಲಿದ ಸಭಿಕರು

06_HSN_07
Published on

ಹಾಸನ: ಹಾಸನ ಸಾಹಿತ್ಯೊತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ನಡೆದ ‘ಕಂಡದ್ದು ಕಂಡ ಹಾಗೆ’ ವಿಚಾರಗೋಷ್ಟಿಯು ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜತೆಗೆ ಸಾಹಿತಿಗಳ ಅನುಭವದ ಮಾತುಗಳು ಸಾಹಿತ್ಯಾಸಕ್ತರನ್ನು ಚಿಂತನೆಗೆ ಪ್ರೇರೇಪಿಸಿದರು.

ಕವಿ ಬಿ.ಆರ್.ಲಕ್ಷ್ಮಣ್‌ರಾವ್, ನಟ ಹಾಗು ರಂಗಭೂಮಿ ಕಲಾವಿದ ಮಂಡ್ಯ ರಮೇಶ್, ಲೇಖಕ ವಸುಧೇಂದ್ರ ಅವರು ಹಾಸ್ಯದ ದಾಟಿಯಲ್ಲಿ ಕೆಲವು ಪ್ರಸಂಗಗಳನ್ನು ಪ್ರಸ್ತಾಪಿಸಿದರೆ ಡಾ.ಅನುರಾಧಾ ಅನಂತಮೂರ್ತಿ ಹಾಗೂ ಚಂಪಾಶೆಟ್ಟಿ ಅವರು ಕೆಲವು ಘಟನೆಗಳ ಮೂಲಕ ಜೀವನದಲ್ಲಿ ಬದಲಾವಣೆ ಬಗ್ಗೆ ಹೇಳಿ ಸಭಿಕರಿಂದ ಚಪ್ಪಾಳೆ ಪಡೆದವು. ಗೋಷ್ಟಿಯನ್ನು ಸಾಹಿತಿ ಜೋಗಿ ಅವರು ನಿರ್ವಹಿಸಿದರು.

ಮೊದಲಿಗೆ ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಮಾತನನಾಡಿ, ಗೋಪಾಲಕೃಷ್ಣ ಅಡಿಗರು ಹಾಗು ನಾವು ತುಂಬಾ ಆಪ್ತರು. ನಾನು, ವೆಂಕಟೇಶಮೂರ್ತಿ ಅವರು ಒಟ್ಟಿಗೆ ಕುಳಿತಾಗ ಕವಿತೆ ಬರೆಯುವುದರ ಬಗ್ಗೆ ಮಾತನಾಡುತ್ತಿದ್ದೆ. ಆಗ ಅವರು ಒಳ್ಳೆಯ ಪದ್ಯಕ್ಕೆ ಕಾಯಬೇಕು ಎಂದಿದ್ದರು. ಕವಿ ಹುಟ್ಟಬೇಕೆಂದರೆ ಕಾಯುವುದು ಅತ್ಯವಶ್ಯ. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಫೇಸ್‌ಬುಕ್‌ನಲ್ಲಿ ಕವಿತೆ ಪೋಸ್ಟ್ ಮಾಡದಿದ್ದರೆ ಕೆಲವರಿಗೆ ನಿದ್ರೆ ಬರುವುದಿಲ್ಲ. ಕವಿತೆ ಹುಟ್ಟಲು ಕಾಯಬೇಕೆಂಬ ಮನಸ್ಥಿತಿ ಈಗಿನವರಿಗಿಲ್ಲ. ಅಡಿಗರ ಆ ಸಲಹೆಯನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ ಎಂದರು.

ಚಿತ್ರ ಸಾಹಿತಿ ಚಂಪಾಶೆಟ್ಟಿ ಅವರು ಮಾತನಾಡಿ, ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಿಂತಿದ್ದೆ. ಆಗ ಎಲ್ಲರೂ ದೊಡ್ಡ ಕಲಾವಿದರು ಬಂದರೆಂದು ಕೈಮುಗಿದು ನಮಸ್ಕರಿಸಿದರು. ನಾನು ನಮಸ್ಕಾರ ಮಾಡಿದಾಗ ಅವರು ಪ್ರತ್ರಿಯಿಸದಿದ್ದರೆ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆಂದು ಅವರಿಗೆ ಗೌರವಿಸಲಿಲ್ಲ. ನನ್ನ ಮುಂದೆಯೇ ಹೋಗಿದ್ದ ಅವರು ವಾಪಸ್ ಬಂದು ನನಗೆ ನಮಸ್ಕಾರ ಮಾಡಿದ್ದರು, ಅವರೇ ಡಾ. ರಾಜ್‌ಕುಮಾರ್. ಮೇರು ನಟನ ಸರಳತೆ ಕಂಡ ನಾನು ಆ ಬಳಿಕ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡೆ ಎಂದರು.

ಮಂಡ್ಯ ರಮೇಶ್ ಅವರು ಮಾತನಾಡಿ, ನೀನಾಸಂನಲ್ಲಿ ವರ್ಷಕ್ಕೊಂದು ಬಾರಿ ನಡೆಯುವ ಶಿಬಿರಕ್ಕೆ ಸಾಹಿತಿ ಶಿವರಾಂ ಕಾರಂತರು ಬಂದಿದ್ದರು. ತಮ್ಮ ಭಾಷಣದಲ್ಲಿ ಮಾನವನ ಉಗಮ-ಮಂಗನಿಂದ ಮಾನವ ಆದ ಬಗೆಯನ್ನು ವೈಜ್ಞಾನಿಕವಾಗಿ ವಿವರಿಸಿದ್ದರು. ಆಗ ಪ್ರಭು ಎಂಬ ವಿದ್ಯಾರ್ಥಿ ಎದ್ದು ನಿಂತು, ಮಂಗನಿಂದ ಮಾನವ ಆಗಿದ್ದಕ್ಕೆ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದ್ದ. ಅದಕ್ಕೆ ತಕ್ಷಣವೇ ಉತ್ತರಿಸಿದ್ದ ಕಾರಂತರು, ನೀನೆ ಇದಿಯಲ್ಲ ಎಂದು ಮಾತು ಮುಗಿಸಿಬಿಟ್ಟರು ಎಂದರು.

ಮತ್ತೊಂದು ಘಟನೆ ಸ್ಮರಿಸಿದ ರಮೇಶ್ ಅವರು, ಬಿ.ವಿ.ಕಾರಂತರ ಮನೆಯಲ್ಲಿ ಕಳ್ಳತನವಾದಾಗ ಅವರ ಪತ್ನಿ ಪ್ರೇಮಾ ಕಾರಂತ ಅವರು ಕಳುವಾಗಿರುವ ಸಾಮಾಗ್ರಿಗಳ ಪಟ್ಟಿ ಮಾಡುತ್ತಿದ್ದಾಗ ಪದಶ್ರೀ ಪ್ರಶಸ್ತಿಯನ್ನೂ ಕದ್ದಿದ್ದಾರೆ ಎಂದರು. ಆಗ ಮಾತನಾಡಿದ್ದ ಕಾರಂತರು, ಸದ್ಯ ಅವನಿಗಾದರೂ ಅದರ ಯೋಗ್ಯತೆ ಗೊತ್ತಾಗಿದೆಯಲ್ಲ ಎಂದಿದ್ದರು. ನಮ್ಮ ಜೀವನದಲ್ಲಿ ನಿತ್ಯ ನಡೆಯುವ ಅನುಭವಗಳನ್ನು ಕ್ರೂಢಿಕರಿಸಿಕೊಂಡು ಆಗಾಗ ಮೆಲುಕು ಹಾಕುತ್ತಾ ಇದ್ದರೆ ಸಾಹಿತ್ಯ ಹುಟ್ಟುತ್ತದೆ. ಜತೆಗೆ ಹಾಸ್ಯ ಭಾವವೂ ಮೂಡುತ್ತದೆ ಎಂದರು.

ಒಮ್ಮೆ ಪತ್ರಕರ್ತ ರವಿ ಬೆಳೆಗೆರೆ ಕಚೇರಿಗೆ ಹೋದಾಗ ಜಾನಕಿ ಹೆಸರಿನಲ್ಲಿ ಅಂಕಣ ಬರೆಯುವ ಲೇಖಕಿಯನ್ನು ಪರಿಚಯಿಸಿ ಎಂದು ಕೇಳಿದ್ದೆ. ಅದಕ್ಕೆ ಅವರು ಅಲ್ಲಿ ಓಡಾಡುತ್ತಿದ್ದಾರಲ್ಲಾ ಅವರೇ ಜಾನಕಿ ಎಂದರು. ಆ ಜಾನಕಿ ಬೇರೆ ಯಾರೂ ಅಲ್ಲ ಅವರೇ ಜೋಗಿ ಎಂದರು.

ಲೇಖಕ ವಸುಧೇಂದ್ರ ಅವರು ಮಾತನಾಡಿ, ಕಾರ್ಯ ನಿಮಿತ್ತ ಇಂಗ್ಲೆಂಡ್‌ನಲ್ಲಿದ್ದಾಗ ಪ್ರಾಜೆಕ್ಟ್‌ಗಾಗಿ ಕಂಪನಿಯ ವ್ಯವಸ್ಥಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ಯಾವ ಕಾರಣಕ್ಕೂ ನಮಗೆ ಪ್ರಾಜೆಕ್ಟ್ ಕೊಡಲು ಒಪ್ಪಿರಲಿಲ್ಲ. ಆ ಕ್ಷಣಕ್ಕೆ ಆತನ ಮೇಲೆ ಸಾಕಷ್ಟು ಸಿಟ್ಟು ಬಂದಿತ್ತು. ನಾನೇ ಆತನಿಗೆ ಸಿಗರೇಟ್ ಕೊಡಲಾ ಎಂದು ಕೇಳಿದಾಗ ಬೇಡವೆಂದು ತನ್ನ ಜೇಬಿನಿಂದ ಗಣೇಶ ಬೀಡಿ ತೆಗೆದರು. ಇಂಗ್ಲೆಂಡ್‌ನಲ್ಲಿ ಕರ್ನಾಟಕದ ಗಣೇಶ ಬೀಡಿ ಇದೆಯಲ್ಲ, ಕನ್ನಡದ ಹೆಸರು ಇಲ್ಲಿಯೂ ಪ್ರಚಲಿತದಲ್ಲಿದೆ ಎಂದು ಖುಷಿಪಟ್ಟಿದ್ದೆ, ಹೀಗೆ ಹಲವು ಸ್ವಾರಸ್ಯಕರ ಪ್ರಸಂಗಗಳನ್ನು ವಸುಧೇಂದ್ರ ಅವರು ತೆರೆದಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net