ಅತೀ ಕಡಿಮೆ ಕುಷ್ಠರೋಗಿಗಳ ಪೈಕಿ ಹಾಸನಗೆ 3ನೇ ಸ್ಥಾನ: ಡಾ. ನಾಗೇಶ್ ಪಿ ಆರಾಧ್ಯ ಮಾಹಿತಿ

31_HSN_01
Published on

ಹಾಸನ: ಜಿಲ್ಲೆಯಲ್ಲಿ 2024-2025 ನೇ ಸಾಲಿನಲ್ಲಿ ಕೇವಲ 7 ಕುಷ್ಠರೋಗಿಗಳು ಮಾತ್ರ ಕಂಡು ಬಂದಿದ್ದು, ಹರಡುವಿಕೆಯ ಪ್ರಮಾಣವು ಕೇವಲ ಶೇ. 0.04 ಆಗಿದ್ದು ರಾಜ್ಯದಲ್ಲಿ ಅತೀ ಕಡಿಮೆ ಪ್ರಕರಣಗಳುಳ್ಳ ಜಿಲ್ಲೆಗಳಲ್ಲಿ ಹಾಸನ ಜಿಲ್ಲೆಯು 3ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಪಿ ಆರಾಧ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮತ್ತು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಕಚೇರಿಯ ಸಂಯುಕ್ತಾಶ್ರಯದಲ್ಲಿ ಬಿ.ಸಿ.ರಾಯ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಆಂದೋಲನದ-2025ರ ಪಾಕ್ಷಿಕ ಆಚರಣೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಜಿಲ್ಲೆಯಲ್ಲಿರುವ 7 ಕುಷ್ಠರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 2025ರ ಘೋಷ ವಾಕ್ಯವಾದ ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ ಎಂದ ಅವರು ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ರೂಪರೇಷೆಗಳ ಬಗ್ಗೆ ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನವರಿ-30ರಿಂದ ಫೆಬ್ರವರಿ-13ರ ವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಬಿ.ಶಿವಶಂಕರ್, ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ಮುಂದಿನ ತೊಂದರೆಗಳನ್ನು ಹಾಗೂ ಅಂಗವಿಕಲತೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಸಾಧ್ಯತೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಕಚೇರಿಯ ಸಿಬ್ಬಂದಿ ವರ್ಗದವರು, ಜಿಲ್ಲೆಯ ಎಲ್ಲಾ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net