ಪುಷ್ಪಗಿರಿ ಶ್ರೀ ಸೋಮಶೇಖರ ಸ್ವಾಮೀಜಿ ಮೇಲೆ ಗಂಭೀರ ಆರೋಪ ಏನದು ?

REVANNA siddegowda- Press meet (5)
Published on

ಹಾಸನ: ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಬೇಲೂರು ತಾಲೂಕಿನ ಚಿಲ್ಕೂರು ಶ್ರೀ ಶಿವಲಿಂಗೇಶ್ವರ ಜಂಗಮ ಮಠದ ಆಸ್ತಿ ಕಬಳಿಕೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥ ರೇವಣ್ಣ ಸಿದ್ದೇಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮಠದ ಜಮೀನನ್ನು ಗ್ರಾಮದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಬೇಲೂರು ತಹಸೀಲ್ದಾರ್ ಸಹ ಕೈ ಜೋಡಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ದೇವಾಲಯ ಪೂಜೆ ಮಾಡಲು ವಿಶ್ವನಾಥನಿಗೆ ಬಿಡುತ್ತಿಲ್ಲ. ಯಾವುದಾದರೂ ಹೊತ್ತಿನಲ್ಲಿ ಬಂದು ದೇವಸ್ಥಾನ ಬಾಗಿಲಿಗೆ ಬೀಗ ಹಾಕುವುದು, ವಿನಾಕಾರಣ ತೊಂದರೆ ನೀಡುವುದು ಮುಂದುವರಿದಿದೆ ಎಂದು ಆರೋಪಿಸಿದರು.

ಗ್ರಾಮದ ಸರ್ವೇ ನಂ. 36 ರಲ್ಲಿ 1.18 ಎಕರೆ ಜಮೀನು ಜಂಗಮ ಮಠಕ್ಕೆ ದತ್ತಿಯಾಗಿ ಬಂದಿದೆ. ಈ ಹಿಂದೆ ಸ್ವಾಮೀಜಿಯಾಗಿದ್ದ ಶ್ರೀ ಬಸವರಾಜ ಸ್ವಾಮೀಜಿ ಕಾಲವಾದ ನಂತರ ದೇವಾಲಯ ಪೂಜೆ ಹಾಗೂ ಜಮೀನನ್ನು ವಿಶ್ವನಾಥ ಎಂಬ ಅರ್ಚಕನಿಗೆ ವಹಿಸಿಕೊಡಲಾಗಿತ್ತು. ಜಂಗಮ ಮಠ ಮುಜರಾಯಿ ಇಲಾಖೆಗೆ ಸೇರಿದ್ದು ಪುಷ್ಪಗಿರಿ ಮಠದ ಸ್ವಾಮೀಜಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೇರೆಯವರಿಗೆ ಪರಭಾರೆ ಮಾಡಿರುವ ಜಮೀನನ್ನು ಅರ್ಚಕನಿಗೆ ಬಿಟ್ಟುಕೊಡಬೇಕು. ನಿತ್ಯ ಪೂಜೆಗೆ ತೊಂದರೆ ನೀಡದಂತೆ ಸ್ವಾಮೀಜಿಗೆ ತಿಳಿಹೇಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net