

ಹಾಸನ: ಬಡಾವಣೆ ಠಾಣೆ ಪೇದೆ ಸೇರಿ ಏಳು ಜನರಿಗೆ ಮಂಗಳವಾರ ಕರೊನಾ ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 299ಕ್ಕೆ ಏರಿಕೆಯಾಗಿದೆ.
ಕೋವಿಡ್-19ನಿಂದ ಗುಣಮುಖರಾಗಿ ಇಲ್ಲಿವರೆಗೆ 215 ಜನ ಡಿಸ್ಚಾರ್ಜ್ ಆಗಿದ್ದು, 83 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿರುವ ಸಹೋದರನ ಗೃಹ ಪ್ರವೇಶ ಸಮಾರಂಭಕ್ಕೆ ತೆರಳಿದ್ದ 36 ವರ್ಷದ ಪೇದೆಗೆ ಸೋಂಕು ತಗುಲಿದೆ. ಜೂ. 16 ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಇವರು ಠಾಣೆಯ 30 ಸಹೋದ್ಯೋಗಿಗಳ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಕಚೇರಿ ಕೆಲಸಕ್ಕಾಗಿ ಕಳೆದ ಒಂದು ವಾರದಿಂದ ನೂರಾರು ಜನರು ಭೇಟಿ ನೀಡಿದ್ದು ನಗರದಲ್ಲಿ ಆತಂಕ ಮನೆ ಮಾಡಿದೆ. ಮೂರು ದಿನಗಳ ಹಿಂದೆ ಶೀತ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದರಿಂದ ಪೇದೆ ತಪಾಸಣೆಗೆ ಒಳಪಟ್ಟಿದ್ದರು. ಬಡಾವಣೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸಹ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಬಂದ ಸಾರ್ವಜನಿಕರ ಪತ್ತೆ ಹಚ್ಚುವುದು ಸಾಹಸದ ಕೆಲಸವಾಗಿದೆ.
ಮುಂಬೈನಿಂದ ಬಂದಿದ್ದ ಚನ್ನರಾಯಪಟ್ಟಣದ 41 ವರ್ಷದ ವ್ಯಕ್ತಿ, 29 ವರ್ಷದ ಮಹಿಳೆ, 9 ವರ್ಷದ ಮಗು, 6 ವರ್ಷದ ಬಾಲಕ, 44 ವರ್ಷದ ಪುರುಷ ಹಾಗೂ ಬೆಂಗಳೂರಿನಿಂದ ಬಂದಿರುವ 24 ವರ್ಷದ ಯುವಕನಿಗೆ ಕರೊನಾ ಸೋಂಕು ತಗುಲಿದೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಇವರಿಗೆ ಏಳು ದಿನಗಳ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ಹಾಸನದ ಪೊಲೀಸ್ ಪೇದೆ ಹೊರತುಪಡಿಸಿ ಉಳಿದ ಆರು ಜನರು ಯಾರೊಂದಿಗೂ ಪ್ರಾಥಮಿಕ ಸಂಪರ್ಕ ಹೊಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
.