

ಹಾಸನ: ಜಿಲ್ಲೆಯಲ್ಲಿ ಸೋಮವಾರ 25 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಅರಸೀಕೆರೆ ತಾಲೂಕಿನ 82 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಈ ಮೂಲಕ ಕರೊನಾ ಪೀಡಿತರ ಸಂಖ್ಯೆ 711ಕ್ಕೆ ಏರಿಕೆಯಾದರೆ ಸಾವಿನ ಪ್ರಮಾಣ 21 ತಲುಪಿದೆ. 455 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 235 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 12 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಆಲೂರು ತಾಲೂಕಿನಲ್ಲಿ 1, ಅರಸೀಕೆರೆ 4, ಚನ್ನರಾಯಪಟ್ಟಣ 4, ಹಾಸನ 12, ಹೊಳೆನರಸೀಪುರ 3 ಹಾಗೂ ಸಕಲೇಶಪುರದಲ್ಲಿ 1 ಪ್ರಕರಣ ದಾಖಲಾಗಿದೆ.
ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅರಸೀಕೆರೆಯ 82 ವರ್ಷದ ವೃದ್ಧೆ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್-19 ಇರುವುದು ತಿಳಿದು ಬಂದಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಗ್ಗೆ ಮೃತಪಟ್ಟರು.
ಪಿ 25475ರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಾಸನದ 50 ವರ್ಷದ ಪುರುಷ, ಪಿ 28938ರ ಜತೆಗಿದ್ದ 68 ವರ್ಷದ ವೃದ್ಧ, ಶೀತ, ಸಾಮಾನ್ಯ ಕೆಮ್ಮಿನಿಂದ ಬಳಲುತ್ತಿದ್ದ 37 ವರ್ಷದ ವ್ಯಕ್ತಿ, ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿರುವ 54 ವರ್ಷದ ಮಹಿಳೆ, ಪಿ 25267ರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 33 ವರ್ಷದ ಪುರುಷ, ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ, 50 ವರ್ಷದ ವ್ಯಕ್ತಿ, ಪಿ 25486ರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವ 42 ವಯೋಮಾನದ ವ್ಯಕ್ತಿ, ಜ್ವರದಿಂದ ಬಳಲುತ್ತಿದ್ದ 26 ವರ್ಷದ ಯುವತಿ, ಪಿ 21597 ಜತೆಗಿದ್ದ 29 ವರ್ಷದ ಮಹಿಳೆ, 23 ವರ್ಷದ ಹೆಲ್ತ್ ಕೇರ್ ಉದ್ಯೋಗಿಗೆ ಸೋಂಕು ದೃಢಪಟ್ಟಿದೆ.
ಅರಸೀಕೆರೆಯಲ್ಲಿ 4 ಪ್ರಕರಣ: ಬೆಂಗಳೂರಿನಿಂದ ಬಂದಿರುವ ಅರಸೀಕೆರೆಯ 37 ವರ್ಷದ ವ್ಯಕ್ತಿ, 55 ವರ್ಷದ ಮಹಿಳೆ, 33 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಬಂದಿರುವ 45 ವರ್ಷದ ಮಹಿಳೆ, ಶಿವಮೊಗ್ಗ ಪ್ರವಾಸ ಹಿನ್ನೆಲೆಯ 49 ವರ್ಷದ ವ್ಯಕ್ತಿ, ಸಾಮಾನ್ಯ ಜ್ವರ ಹಾಗೂ ಶೀತ ಸಮಸ್ಯೆಯಿಂದ ಬಳಲುತ್ತಿದ್ದ 48 ಮತ್ತು 46 ವರ್ಷದ ವ್ಯಕ್ತಿಗಳಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ.
ಬೆಂಗಳೂರಿನಿಂದ ಬಂದಿದ್ದ ಆಲೂರಿನ 29 ಹಾಗೂ ಸಕಲೇಶಪುರದ 27 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಹೊಳೆನರಸೀಪುರದ 72 ವರ್ಷದ ವ್ಯಕ್ತಿ, ಬೆಂಗಳೂರಿನಿಂದ ಬಂದಿರುವ 33 ವರ್ಷದ ಪುರುಷ, ಪಿ 14296ರ ಜತೆಗೆ ಸಂಪರ್ಕ ಹೊಂದಿದ್ದ 28 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ತಿಳಿಸಿದರು.
ಬೆಂಗಳೂರಿನಿಂದ ಬಂದವರಲ್ಲಿ ಸೋಂಕು: ಸೋಮವಾರ ದಾಖಲಾಗಿರುವ 25 ಸೋಂಕಿತರಲ್ಲಿ ಏಳು ಜನರಿಗೆ ಬೆಂಗಳೂರು ಪ್ರವಾಸದ ಹಿನ್ನೆಲೆಯಿದ್ದು, ರಾಜಧಾನಿಯ ಲಾಕ್ ಡೌನ್‌ನಿಂದಾಗಿ ತವರಿಗೆ ಬರುತ್ತಿರುವವರು ಜತೆಗೆ ಡೆಡ್ಲಿ ವೈರಸ್ ಅನ್ನು ಕರೆತರುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.