ಮಂತ್ರದಿಂದ ಮಾವಿನ ಕಾಯಿ ಉದುರಲ್ಲ, ಜನ ಒಪ್ಪುವಂತ ರಾಜಕಾರಣ ಮಾಡಿ ಎಂದು ಪ್ರೀತಂ ಹೇಳಿದ್ದು ಯಾರಿಗೆ ?

PREETHAM J. GOWDA- BJP
Published on

ಹಾಸನ:
ತಾತನ ನಾಮಬಲದಿಂದ ಎಂಪಿ ಆಗಿರುವವರು ಇನ್ನಾದರೂ ಜನ ಒಪ್ಪುವಂತಹ ರಾಜಕಾರಣ ಮಾಡಲಿ ಎಂದು ಶಾಸಕ ಪ್ರೀತಂ ಜೆ. ಗೌಡ ಸಂಸದ ಪ್ರಜ್ವಲ್ ರೇವಣ್ಣಗೆ ಟಾಂಗ್ ನೀಡಿದರು.

ಗುರುವಾರ ಹಾಸನಾಂಬೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ ಕಾರ್ಯಕರ್ತನಾಗಿ ನಾನು ಶಿರಾ ಕ್ಷೇತ್ರ ಪ್ರಚಾರದಲ್ಲಿ ಭಾಗವಹಿಸಿದಾಗ ಇದೇ ಮಹಾನುಭಾವರು ಬಾಯಿಗೆ ಬಂದಂತೆ ಮಾತನಾಡಿದ್ದರು. ಆದರೆ ಮಾರನೇ ದಿನವೇ ಕುಟುಂಬ ಸಮೇತ ಅಲ್ಲಿ ಠಿಕಾಣಿ ಹೂಡಿದ್ದರು. ಹಾಸನ ಸಂಸದ ಜವಾಬ್ದಾರಿ ವಹಿಸಿಕೊಂಡಿದ್ದ ಪಂಚಾಯಿತಿಗಳಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಇಳಿದಿದೆ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ ಎಂದು ಇನ್ನಾದರೂ ಅರಿಯಬೇಕು ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಿಸಿಎಂ ಗೋವಿಂದ ಕಾರಜೋಳ, ಶಾಸಕಿ ಪೂರ್ಣಿಮಾ ಹೀಗೆ ಇತರ ನಾಯಕರ ನೇತೃತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ. ಬಿಜೆಪಿ ಮೇಲೆ ಜನರು ನಂಬಿಕೆ ಇಟ್ಟು ಮತ ನೀಡಿದ್ದಾರೆ. ಯುವ ಉತ್ಸಾಹಿ ಡಾ. ರಾಜೇಶ್ ಗೌಡ ಉತ್ತಮ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ಸಂಸದರರ ಯೋಗ ಕ್ಷೇಮ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆದ್ದರಿಂದಲೇ ಅವರ ಮನೆಯಿಂದಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಲಾಗಿದೆ. ವಿದ್ಯಾ ನಗರದಲ್ಲಿರುವ ನನ್ನ ಮನೆಗೂ ಇನ್ನೂ ರಸ್ತೆ ಆಗಿಲ್ಲ. ಆದರೆ ಸಂಸದರ ಬಗ್ಗೆ ಕಾಳಜಿ ವಹಿಸಿದ್ದೇನೆ. ಅದಕ್ಕೆ ಅವರು ನನಗೆ ಶ್ಲಾಘಿಸಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net