ಜ. 6ರಿಂದ ಹಾಸನ ಸಾಹಿತ್ಯೋತ್ಸವ : ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜನೆ

Kannada
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲಾ ಘಟಕದಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ.6 ಮತ್ತು 7ರಂದು ‘ಹಾಸನ ಸಾಹಿತ್ಯೋತ್ಸವ’ ಆಯೋಜಿಸಲಾಗಿದೆ.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷಗಳ ಹಿಂದೆ ಹೊಯ್ಸಳೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅದರ ಎರಡನೇ ಆವೃತ್ತಿಯಾಗಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಹಾಸನ ಸಾಹಿತ್ಯೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತಿ ಹಂ.ಪ. ನಾಗರಾಜಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದು, ಸಾಹಿತಿ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸುವರು. ಎರಡು ದಿನಗಳ ಉತ್ಸವದಲ್ಲಿ ಗೀತ ಸಂಗೀತ, ನಮ್ಮ ನೆಲೆ ನಮ್ಮ ಸೆಲೆ, ರಂಗಾಂತರಂಗ, ಕಂಡದ್ದು ಕಂಡ ಹಾಗೆ, ಹೊಸ ದನಿ ಹೊಸ ಬನಿ, ನಾಳೆಗಳು ನಮಗಿರಲಿ, ಕವಿತಾ ಸಮಯ, ಎಐ ಅಮಾನುಷ ಕೈ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಜ.7ರಂದು ಮಧ್ಯಾಹ್ನ 2.45ಕ್ಕೆ ಸಮಾರೋಪದಲ್ಲಿ ಸಾಹಿತಿ ಬಾನು ಮುಷ್ತಾಕ್ ಅಧ್ಯಕ್ಷತೆ ವಹಿಸುವರು. ರಾಘವೇಂದ್ರ ಪಾಟೀಲ ಸಮಾರೋಪ ನುಡಿಗಳನ್ನಾಡುವರು ಎಂದು ಮಾಹಿತಿ ನೀಡಿದರು.

ನಾಡಿನ ಚಿರಪರಿಚಿತ 50ಕ್ಕೂ ಹೆಚ್ಚು ಸಾಹಿತಿಗಳು, ಸಾಧಕರು, ನಟರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಹಾಸನ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಲ್ಕರಹಿತ ನೋಂದಣಿಗೆ ಅವಕಾಶವಿದೆ. ಹೊರ ಜಿಲ್ಲೆಗಳಿಂದ ಬರುವ ಸಾಹಿತ್ಯಾಸಕ್ತರು ವಸತಿಗಾಗಿ 250 ರೂ. ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿ ಮತ್ತು ನೋಂದಣಿಗಾಗಿ ಮೊ: 9108847480/ 74114 77149 ಸಂಪರ್ಕಿಸಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಹಾಸನ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಎಚ್.ಬಿ. ಮದನಗೌಡ, ಸಂಚಾಲಕರಾದ ಬಿ.ಆರ್. ಲಕ್ಷ್ಮಣ್‌ರಾವ್, ಗಿರೀಶ್‌ರಾವ್ ಹತ್ವಾರ್ (ಜೋಗಿ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಗೌರವ ಕೋಶಾಧ್ಯಕ್ಷ ಬಿ.ಎನ್. ಜಯರಾಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net