ಹೋಟೆಲ್‌ನಲ್ಲಿರಲಿ ಸುರಕ್ಷತಾ ಕ್ರಮ

7HSN2
Published on


ಹಾಸನ: ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ತೆರೆಯಲು ರಾಜ್ಯ ಸರ್ಕಾರ ಆದೇಶಿಸಿದ್ದು ಆರೋಗ್ಯ ಹಿತದೃಷ್ಟಿಯಿಂದ ಹೋಟೆಲ್ ಮಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಆಯುಕ್ತ ಆರ್.ಕೃಷ್ಣಮೂರ್ತಿ ಸೂಚನೆ ನೀಡಿದರು.


ನಗರಸಭೆ ಕುವೆಂಪು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದರು.


ಸೋಮವಾರದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಬಾಗಿಲು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಲಾಕ್‌ಡೌನ್‌ನಲ್ಲಿ ಹಂತ ಹಂತವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕಾಗುತ್ತದೆ. ಭಾರತದಲ್ಲಿ ಕರೊನಾ ಹಾನಿಯುಂಟು ಮಾಡಿಲ್ಲ ಎಂಬುದು ಖುಷಿಯ ವಿಚಾರ ಎಂದರು.


ಆದರೆ ಕರೊನಾ ಕುರಿತು ನಿರ್ಲಕ್ಷೃ ಭಾವ ಹೊಂದದೆ ಎಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿ. ಊಟ ಅಥವಾ ಉಪಾಹಾರಕ್ಕಾಗಿ ಬರುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಬೇಕು. ಮಾಸ್ಕ್, ಕರವಸ್ತ್ರದ ಜತೆಗೆ ಬರುವಂತೆ ಹೋಟೆಲ್‌ಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಸ್ಯಾನಿಟೈಸರ್ ಬಾಟಲಿಯನ್ನು ಕಡ್ಡಾಯವಾಗಿ ಕೌಂಟರ್ ಬಳಿ ಇಟ್ಟಿರಬೇಕು ಎಂದರು.


ನಗರಸಭೆ ಅಧಿಕಾರಿಗಳು ಯಾವಾಗ ಬೇಕಾದರೂ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸುವ ಸಾಧ್ಯತೆಯಿದ್ದು, ಏನಾದರೂ ಲೋಪ ಕಂಡುಬಂದರೆ ಅವರ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಇನ್ನು ಅನುಮತಿ ನೀಡಿಲ್ಲ. ಅವರಿಗೆ ಪ್ರತ್ಯೇಕ ಜಾಗ ಮಾಡಿಕೊಡಲು ಜಿಲ್ಲಾಡಳಿತ ನಿರ್ಧರಿಸಿದ್ದು ಜಿಲ್ಲಾಧಿಕಾರಿಯೇ ಅಂತಿಮ ನಿರ್ಧಾರ ಪ್ರಕಟಿಸುತ್ತಾರೆ. ಯಾವ ಯಾವ ರಸ್ತೆಗಳಲ್ಲಿ ಕ್ಯಾಂಟೀನ್ ನಡೆಸಬೇಕೆಂಬುದರ ಕುರಿತು ಒಂದು ವಾರದಲ್ಲಿ ತಿಳಿಸಲಾಗುವುದು ಎಂದು ಹೇಳಿದರು.


ಹಾಸನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಭಿನಂದನ್ ಮಾತನಾಡಿ, ಗ್ರಾಹಕರಿಗೆ ಬಿಸಿನೀರು, ಸ್ವಾನಿಟೈಸರ್ ವಿತರಣೆಗೆ ಹೋಟೆಲ್ ಮಾಲೀಕರು ಬದ್ಧರಾಗಿದ್ದೇವೆ ಎಂದರು.


ಎರಡೂವರೆ ತಿಂಗಳಿಂದ ದುಡಿಮೆಯಿಲ್ಲದೆ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಆದ್ದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net