

ಬೆಂಗಳೂರು: ಹಾಸನದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಏರಿಕೆಯಾಗಿಲ್ಲ ಎಂದು ವರದಿ ನೀಡಿರುವ ತಜ್ಞರ ಸಮಿತಿಯು, ಹೃದಘಾತಕ್ಕೆ ಸಂಬಂಧಿಸಿದಂತೆ ಅಪಾಯ ಎದುರಿಸುತ್ತಿರುವ ಸಾರ್ವಜನಿಕ ಸಾರಿಗೆ (ಆಟೋ, ಟ್ಯಾಕ್ಸಿ) ಚಾಲಕರಿಗೆ ಹೃದಯ ತಪಾಸಣೆ ನಡೆಸಲು ಶಿಫಾರಸು ಮಾಡಿದೆ.
ಹಾಸನದಲ್ಲಿ ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ವರದಿಯಾದ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸೂಚನೆ ಮೇರೆಗೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯು ಗುರುವಾರ ವರದಿ ಬಿಡುಗಡೆ ಮಾಡಿತು.
ಹಾಸನದಲ್ಲಿ 2024ರ ಮೇ ಮತ್ತು ಜೂನ್ ತಿಂಗಳಲ್ಲಿ 19 ಹೃದಯಾಘಾತದ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಅದೇ ಅವಧಿಯಲ್ಲಿ 20 ಸಾವಿನ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಹಾಸನ ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಏಕಾಏಕಿ ಏರಿಕೆಯಾಗಿಲ್ಲ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.
10 ಮಂದಿಗೆ ಹೃದಯಾಘಾತ:
ಇತ್ತೀಚೆಗೆ ಹಾಸನದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿರುವುದಾಗಿ ವರದಿಯಾದ 24 ಪ್ರಕರಣಗಳನ್ನು ಅಧ್ಯಯನ ನಡೆಸಿರುವ ತಜ್ಞರ ಸಮಿತಿ ಅವುಗಳಲ್ಲಿ ನಾಲ್ಕು ಸಾವುಗಳು ಹೃದಯಾಘಾತವಲ್ಲ ಬದಲಿಗೆ ರಸ್ತೆ ಅಪಘಾತ, ಮೂತ್ರಪಿಂಡ ಕಾಯಿಲೆ, ಗ್ಯಾಸ್ಟ್ರೋಎಂಟರೈಟಿಸ್ ಮತ್ತು ವಿದ್ಯುತ್ ಆಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದೆ. ಉಳಿದಂತೆ 10 ಮಂದಿ ಮಾತ್ರವೇ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಲ್ಲಿ ಮೂವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಉಳಿದ 7 ಪ್ರಕರಣಗಳಲ್ಲಿ ಶವ ಪರೀಕ್ಷೆ ಹಾಗೂ ಇಸಿಜಿ ಪರೀಕ್ಷೆಯಿಂದ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತಪಟ್ಟಿದೆ. ಇನ್ನುಳಿದ 10 ಪ್ರಕರಣಗಳಲ್ಲಿ ಸಂಭವನೀಯ ಹೃದಯಾಘಾತ ಸಾವಿನಗೆ ಕಾರಣ ಎನ್ನಲಾಗಿದೆ. ಅಂದರೆ ಮೃತರ ಅಧಿಕ ರಕ್ತದೊತ್ತಡ, ಮಧುಮೇಹ, ಅತೀವ ಬೊಜ್ಜಿನಿಂತಹ ಸಮಸ್ಯೆ ಎದುರಿಸುತ್ತಿದ್ದರು ಎಂದು ವರದಿಯಲ್ಲಿ ಹೇಳಿದೆ.
ಯುಜನರಲ್ಲಿ ಹೃದಯಾಘಾತ:
20 ಮರಣ ಪ್ರಕರಣಗಳಲ್ಲಿ ಶೇ. 75 ನಿಖರ ಕಾರಣಗಳನ್ನು ಗುರುತಿಸಲಾಗಿದೆ. ಆದರೆ ಶವ ಪರೀಕ್ಷೆಗೆ ಕುಟುಂಬಸ್ಥರು ಸಹಕಾರ ನೀಡದ ಕಾರಣ ಉಳಿದ ಶೇ.25 ನಿಖರ ಕಾರಣ ತಿಳಿಯಲು ಸಾಧ್ಯವಾಗಿಲ್ಲ. ಯುವಜನರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಕಳವಳಕಾರಿ. ಹಾಸನದಲ್ಲಿ ವರದಿಯಾದ ಹೃದಯಾಘಾತದ ಸಾವಿನ ಪ್ರಕರಣಗಳಲ್ಲಿ 19, 21, 23, 32, 37, 38 ಮತ್ತು 43 ವರ್ಷದವರೂ ಸೇರಿದ್ದಾರೆ. ಇವರಲ್ಲಿ ನಾಲ್ಕು ಪ್ರಕರಣಗಳ ಶವ ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೆ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾಗಿ ತಿಳಿದು ಬಂದಿದೆ. ಇನ್ನು 45 ವರ್ಷದೊಳಗಿನ ಏಳು ಮೃತರಲ್ಲಿ ಅನೇಕರು ಧೂಮಪಾನ, ಮದ್ಯಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯ ಕೌಟುಂಬಿಕ ಇತಿಹಾಸ ಹೊಂದಿದ್ದು, ಇವರಲ್ಲಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
ವರದಿಯ ಪ್ರಮುಖ ಅಂಶಗಳು:
* ಹಾಸನದಲ್ಲಿ ಹೃದ್ರೋಗ ಸಂಬಂಧಿ ಸಾವಿನ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಆಗಿಲ್ಲ.
* ಜಯದೇವ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಶಾಖೆಯಲ್ಲಿ ವರದಿಯಾದ ಹೃದ್ರೋಗ ಸಂಬಂಧಿ ಪ್ರಕರಣಗಳ ವಿಶ್ಲೇಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ ಹೃದಯ ಸಂಬಂಧಿ ಸಾವು ಹೆಚ್ಚಳವಾಗಿಲ್ಲ.
* ಯುವಜನರಲ್ಲಿ ಸಂಭವಿಸುತ್ತಿರುವ ದಿಢೀರ್ ಸಾವು ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
* ಹೃದಯ ರಕ್ತನಾಳದ ತಪಾಸಣೆ ಮತ್ತು ಆರೋಗ್ಯ ಶಿಕ್ಷಣದ ಅಗತ್ಯವಿದೆ.
ಶಿಫಾರಸುಗಳು:
* ಹೃದಯ ಆರೋಗ್ಯ ಕಣ್ಗಾವಲು ಕಾರ್ಯಕ್ರಮದಡಿ ಆಸ್ಪತ್ರೆಯಿಂದ ಹೊರಗೆ ಸಂಭವಿಸುವ ಹಠಾತ್ ಸಾವುಗಳಿಗೆ ಹೃದಯಾಘಾತದ ಕಾರಣ ಎಂಬುದನ್ನು ದೃಢೀಕರಿಸಲು ಶವಪರೀಕ್ಷೆಗೆ ಒಳಪಡಿಸಬೇಕು.
* ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೃದಯಾಘಾತದ ಸಂಬಂಧಿ ತಪಾಸಣೆಗಾಗಿ ಇಸಿಜಿ ಯಂತ್ರಗಳು ಮತ್ತು ತುರ್ತು ಹೃದಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.
* ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಜಿಮ್ನಾಷಿಯಂನ ದೈಹಿಕ ತರಬೇತುದಾರರಂತಹ ಕೇಂದ್ರೀಕೃತ ಗುಂಪುಗಳಿಗೆ ಸಿಪಿಆರ್ ತರಬೇತಿ ನೀಡಬೇಕು.
* ಆಟೋ ಮತ್ತು ಕ್ಯಾಬ್ ಸೇರಿ ಚಾಲಕರ ಹೃದಯ ಸ್ಕ್ರೀನಿಂಗ್ ನಡೆಸಲು ಕ್ರಮ ವಹಿಸಬೇಕು.
ಚಾಲಕರಿಗೆ ಹೃದಯ ತಪಾಸಣೆ
ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರಲ್ಲಿ 6 ಮಂದಿ ಆಟೊ ರಿಕ್ಷಾ ಮತ್ತು ಕ್ಯಾಬ್ ಚಾಲಕರಾಗಿದ್ದಾರೆ. ಇದರಿಂದ ಆಟೊ ರಿಕ್ಷಾ, ಕ್ಯಾಬ್ ಸೇರಿ ಶೇ. 30 ಸಾರ್ವಜನಿಕ ಸಾರಿಗೆ ಚಾಲಕರು ಕಿರಿಯ ವಯಸ್ಸಿನಲ್ಲಿಯೇ ಹೃದ್ರೋಗದ ಅಪಾಯ ಎದುರಿಸುತ್ತಿರುವುದು ತಿಳಿದುಬಂದಿದೆ. ಬದಲಾದ ಜೀವನಶೈಲಿ, ಸರಿಯಾಗಿ ಊಟ,ತಿಂಡಿ, ನಿದ್ರೆ ಮಾಡದಿರುವುದು ಸೇರಿ ವಿವಿಧ ಕಾರಣಗಳಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ತಜ್ಞರ ಸಮಿತಿಯ ಶಿಫಾರಸು ಅನ್ವಯ ಸಾರ್ವಜನಿಕ ಸಾರಿಗೆ ಚಾಲಕರಿಗೆ ಅವರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೃದಯ ತಪಾಸಣೆ ಶಿಬಿರಗಳನ್ನು ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋಟ್ - 1
ಹೃದಯಾಘಾತದ ಸಾವಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿಯು ಹೃದಯ ಸಮಸ್ಯೆಗಳ ಅಪಾಯ ಎದುರಿಸುತ್ತಿರುವ ವರ್ಗದವರನ್ನು ಗುರುತಿಸಿ ವರದಿ ಸಲ್ಲಿಸಿದ್ದು, ಕೆಲ ಶಿಾರಸುಗಳನ್ನು ಮಾಡಿದೆ. ಇದರ ಅನ್ವಯ ತಪಾಸಣೆ ಶಿಬಿರಗಳನ್ನು ನಡೆಸಿ ಹೃದ್ರೋಗ ತಡೆಯಲು ಕ್ರಮವಹಿಸಲಾಗುವುದು.
- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕೋಟ್ - 2
ಹಾಸನದಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚಳ ಎಂಬ ಮಾಧ್ಯಮದ ವರದಿಯಿಂದಾಗಿ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಶಾಖೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಶೇ. 20 ಹೆಚ್ಚಳವಾಗಿದೆ. ಆದರೆ ಹೃದ್ರೋಗ ಪ್ರಕರಣಗಳು ಏರಿಕೆಯಾಗಿಲ್ಲ. ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ.
- ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್