ಹೊಯ್ಸಳೇಶ್ವರ ದೇಗುಲ ಆದಾಯ ಕುಸಿತ

DSCN0074
Published on

5,500 ರೂ. ಕಾಣಿಕೆ ಹಣ ಸಂಗ್ರಹ, ಲಾಕ್‌ಡೌನ್ ಪರಿಣಾಮ ಭಕ್ತರು, ಪ್ರವಾಸಿಗರ ಕೊರತೆ

ಹಳೇಬೀಡು: ಮೂರು ತಿಂಗಳ ಲಾಕ್‌ಡೌನ್ ಪರಿಣಾಮ ಇಲ್ಲಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲದ ಹುಂಡಿ ಆದಾಯ ಕುಸಿತ ಕಂಡಿದೆ.
ಶನಿವಾರ ನಾಡಕಚೇರಿ ಸಿಬ್ಬಂದಿ ಹುಂಡಿ ಹಣ ಎಣಿಕೆ ಮಾಡಿದಾಗ ಆರು ತಿಂಗಳ ಅವಧಿಗೆ ಕೇವಲ 5,500 ರೂ. ಕಾಣಿಕೆ ಹಣ ಸಂಗ್ರವಾಗಿದೆ. ಮಾರ್ಚ್ ತಿಂಗಳಿಂದ ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಗುಲಕ್ಕೆ ಸಂಪೂರ್ಣವಾಗಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದಕ್ಕೂ ಮುನ್ನವೆ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖವಾಗಿದ್ದ ಕಾರಣ ಕಾಣಿಕೆ ಸಂಗ್ರಹಣೆಯಲ್ಲಿ ಕುಸಿತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕಳೆದ ಬಾರಿ ಇದೇ ಅವಧಿಯಲ್ಲಿ 1,96,000 ರೂ. ಹಣ ಸಂಗ್ರಹವಾಗಿತ್ತು.
ಇಲ್ಲಿನ ಐತಿಹಾಸಿಕ ದೇಗುಲಗಳನ್ನು ವೀಕ್ಷಿಸಲು ಏಪ್ರಿಲ್, ಮೇ ತಿಂಗಳಿನಲ್ಲಿ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಎರಡು ತಿಂಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗುತ್ತಿತ್ತು. ಆದರೆ, ಅದೇ ಎರಡು ತಿಂಗಳು ದೇಗುಲವನ್ನು ಮುಚ್ಚಿದ್ದ ಕಾರಣ ಕಾಣಿಕೆ ಸಂಗ್ರಹಣೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೂನ್ 1ರಿಂದ ದೇಗುಲವನ್ನು ಭಕ್ತಾದಿಗಳ ಪ್ರವೇಶಕ್ಕೆ ತೆರೆಯಲಾಗಿದೆ. ಹೊಯ್ಸಳೇಶ್ವರ ದೇಗುಲಕ್ಕೆ ಭಕ್ತರಿಗಿಂತಲೂ ಪ್ರವಾಸಿಗರೇ ಹೆಚ್ಚು ಬರುತ್ತಾರೆ. ಪ್ರಸ್ತುತ ಭೇಟಿ ಕೊಡುತ್ತಿರುವವರ ಸಂಖ್ಯೆ ಆಶಾದಾಯಕವಾಗೇನೂ ಇಲ್ಲ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದು ಉಪ ತಹಸೀಲ್ದಾರ್ ಪ್ರದೀಪ್ ಕುಮಾರ್ ಹೇಳಿದರು.
ಎಣಿಕೆ ಕಾರ್ಯದಲ್ಲಿ ಕಂದಾಯ ಅಧಿಕಾರಿ ವಸಂತಕುಮಾರ್, ಶ್ರೀನಿವಾಸ್, ಗ್ರಾಮ ಲೆಕ್ಕಿಗರಾದ ದಿವ್ಯಾ, ಪೂರ್ಣಿಮಾ, ಸುಶ್ಮಿತಾ, ದೇಗುಲದ ಅರ್ಚಕರು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net