

ಮೈಸೂರು: ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜಿನ 1 ಮತ್ತು 2ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಬೇಕು ಹಾಗೂ ವಿದ್ಯಾರ್ತಿಗಳ ಅಂಕಪಟ್ಟಿಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ವತಿಯಿಂದ ಗುರುವಾರ ಮೈಸೂರು ವಿಶ್ವ ವಿದ್ಯಾಲಯದ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಯಿತು.
ಮೈಸೂರು ವಿಶ್ವ ವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜಿನ 2020-21ನೇ ಸಾಲಿನ ಬಿಎ ಪದವಿ ವಿದ್ಯಾರ್ಥಿಗ ಮೊದಲ ಮತ್ತು ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ. ಕಾಲೇಜಿನ ಆಡಳಿತ ಮಂಡಳಿ ಮೊದಲನೇ ಸೆಮಿಸ್ಟರ್‌ನಲ್ಲಿ ಪರಿಚಯಿಸದೆ ಇದ್ದ ದೈಹಿಕ ಶಿಕ್ಷಣ ವಿಷಯವನ್ನು ನಂತರ 6ನೇ ಸೆಮಿಸ್ಟರ್‌ನಲ್ಲಿ ಪರಿಚಯಿಸಿತು.
ಹೀಗಾಗಿ ಮೈಸೂರು ವಿಶ್ವ ವಿದ್ಯಾಲಯವು 159 ವಿದ್ಯಾರ್ಥಿನಿಯರಿಂದ 500 ರೂ.ಗಳನ್ನು ದಂಡವಾಗಿ ಪಡೆದು ಪರೀಕ್ಷೆ ಬರೆಯಲು ಅವಕಾಶ ನೀಡಿತು. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೊದಲನೇ ಸೆಮಿಸ್ಟರ್‌ನಲ್ಲಿ ಉಲ್ಲೇಖಿಸಬೇಕಾಗಿದ್ದ ದೈಹಿಕ ಶಿಕ್ಷಣ ವಿಷಯವನ್ನು 6ನೇ ಸೆಮಿಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಮೊದಲನೇ ಸೆಮಿಸ್ಟರ್‌ನಲ್ಲಿ ಜಿಪಿಎ ಗ್ರೇಡ್ ಪ್ರಕಟವಾಗಿಲ್ಲ. ಆದ್ದರಿಂದ 2ನೇ ಸೆಮಿಸ್ಟರ್ ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ 159 ವಿದ್ಯಾರ್ಥಿಗಳು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಪರೀಕ್ಷಾಂಗ ಕುಲಸಚಿವ ಮಹದೇವನ್ ಅವರಿಗೆ ಮನವಿ ಸಲ್ಲಿಸಲಾಯಿತು. ಎರಡು ದಿನಗಳ ಒಳಗೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ಮಹದೇವನ್ ಭರವಸೆ ನೀಡಿದರು. ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸುಭಾಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪ್ರಮುಖರಾದ ಲಾವಣ್ಯ, ಕಾವ್ಯ, ಚಂದನ, ಧನಲಕ್ಷ್ಮಿ, ಲೇಖನ, ವರ್ಷ ಹಾಗೂ ಇತರರು ಪಾಲ್ಗೊಂಡಿದ್ದರು.