ವರ್ಗಾವಣೆಗಾಗಿ ಪಾದ ಪೂಜೆ ಸಂಸ್ಕೃತಿ ಬೆಳೆಸಿಕೊಂಡಿದ್ದಾರಂತೆ ಹಾಸನದ ಅಧಿಕಾರಿಗಳು

H.D. REVANNA
Published on

ಹಾಸನ: ಜಿಲ್ಲೆಯ ಕೆಲ ಅಧಿಕಾರಿಗಳು ವರ್ಗಾವಣೆಗಾಗಿ ಕೆಲವರ ಪಾದ ಪೂಜೆ ಮಾಡುತ್ತಿದ್ದು ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿರುವ ನೀವು ಬದಲಾಗದಿದ್ದರೆ ಮಕ್ಕಳು-ಮೊಮ್ಮಕ್ಕಳಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಗರ ಸುತ್ತಲಿನ ಕೆಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅಕ್ರಮ ಮನೆ ನಿರ್ಮಿಸಿಕೊಡುತ್ತಿದ್ದಾರೆ. ಪ್ರಭಾವಿಗಳ ಪಾದ ಪೂಜೆ ಮಾಡಿ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ನನ್ನ ಅವಧಿಯಲ್ಲಿ ನಾಯಿಮರಿ ತರ ಇದ್ದ ಅಧಿಕಾರಿಗಳೆಲ್ಲ ಈಗ ಭಾರಿ ಬದಲಾಗಿದ್ದಾರೆ ಎಂದರು.

ನಗರ ಸುತ್ತಲು ಅನಧಿಕೃತ ಲೇಔಟ್‌ಗಳು ತಲೆ ಎತ್ತಿದ್ದು ಕಾನೂನು ಗಾಳಿಗೆ ತೂರಲಾಗುತ್ತಿದೆ. 21 ವರ್ಷ ಶಾಸಕನಾಗಿರುವ ನಾನು ಇಂತಹ ದುರಾಡಳಿತವನ್ನು ಎಂದೂ ಕಂಡಿಲ್ಲ. ನಗರ ಸಮೀಪದ ಬುಸ್ತೆನಹಳ್ಳಿ ಬಳಿ 30 ಎಕರೆ ಜಾಗದಲ್ಲಿ ಲೇಔಟ್ ಮಾಡಲು ಹುಡಾ ಅನುಮತಿ ನೀಡಿದೆ. 1.82 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ 82 ನಿವೇಶನ ಮಾಡಿದ್ದಾರೆ. ಇಲ್ಲಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ ಯಾವ ವ್ಯವಸ್ಥೆಯನ್ನು ಮಾಡಿಲ್ಲ.

ಖಾಸಗಿ ಲೇಔಟ್‌ಗಳಿಂದ ಇಂತಿಷ್ಟು ಜಾಗ ಬಿಟ್ಟುಕೊಡುವಂತೆ ಬೇಡಿಕೆ ಸಹ ಇಡುತ್ತಿದ್ದಾರೆ. ದುರಾವರ್ತನೆ ಹೀಗೆ ಮುಂದುವರಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net