ಎಂಟು ತಿಂಗಳ ಬಳಿಕ ಆರಂಭವಾದ ತರಗತಿಗೆ ಹಾಜರಾದ ಪದವಿ ವಿದ್ಯಾರ್ಥಿಗಳೆಷ್ಟು ?

17HSN4
Published on

ಹಾಸನ: ಎಂಟು ತಿಂಗಳ ಬಳಿಕ ಆರಂಭವಾದ ಪದವಿ ತರಗತಿಗೆ ಜಿಲ್ಲೆಯ 29 ಸರ್ಕಾರಿ ಕಾಲೇಜುಗಳಿಂದ 296 ವಿದ್ಯಾರ್ಥಿಗಳು ಹಾಜರಾದರು.
ಮಾರಕ ಕರೊನಾ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಕಾಲೇಜಿಗೆ ರಜೆ ಘೋಷಿಸಿದ್ದ ಸರ್ಕಾರ ನ. 17 ರಿಂದ ತರಗತಿ ಆರಂಭಿಸಿ ಆದೇಶ ಹೊರಡಿಸಿದೆ. ಮಾಸ್ಕ್, ಸ್ಯಾನಿಟೈಸರ್ ಹಾಗೂ ಪರಸ್ಪರ ಅಂತರದ ಪರಿಪಾಲನೆಯೊಂದಿಗೆ ತರಗತಿ ನಡೆಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಹಾಸನದ ವಿಜ್ಞಾನ ಕಾಲೇಜಿಗೆ 75, ಸರ್ಕಾರಿ ಕಾನೂನು ಕಾಲೇಜಿಗೆ 9, ಹೊಳೆನರಸೀಪುರ ಪ್ರಥಮ ದರ್ಜೆ ಕಾಲೇಜು 79, ಮಹಿಳಾ ಸರ್ಕಾರಿ ಕಾಲೇಜು 106, ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2, ಸಕಲೇಶಪುರ ಕಾಲೇಜಿನ 15, ಜಾವಗಲ್‌ನಲ್ಲಿ 3, ಅರಕಲಗೂಡು 4 ಹಾಗೂ ಹಾಸನದ ಗಂಧದಕೋಠಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 3 ವಿದ್ಯಾರ್ಥಿಗಳು ಮೊದಲ ದಿನ ಹಾಜರಾದರು.

ಸುದೀರ್ಘ ಎಂಟು ತಿಂಗಳ ಬಳಿಕ ಕಾಲೇಜು ಆರಂಭಿಸಲಾಗಿದೆಯಾದರೂ ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ವಿದ್ಯಾರ್ಥಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಬಹುತೇಕ ವಿದ್ಯಾರ್ಥಿಗಳು ಬಡವರು ಹಾಗೂ ಗ್ರಾಮೀಣ ಪ್ರದೇಶದಿಂದ ಬರುವವರೇ ಆಗಿದ್ದು ಸಾರಿಗೆ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಪ್ರಸಕ್ತ ವರ್ಷದ ಬಸ್ ಪಾಸ್ ಅನ್ನು ಮಕ್ಕಳಿಗೆ ನೀಡದೆ ಇರುವುದರಿಂದ ದುಡ್ಡು ಕೊಟ್ಟು ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ.

ಪಾಲಕರು ಸಾಲ ಸೋಲ ಮಾಡಿ ಟಿಕೆಟ್‌ಗೆ ಆಗುವಷ್ಟು ಹಣ ಹೊಂದಿಸಿಕೊಟ್ಟರೂ ಕಾಲೇಜು ತಲುಪಲು ಹಳ್ಳಿಗೆ ಬಸ್ ಬರುತ್ತಿಲ್ಲ. ಹೀಗಾಗಿ ಮಕ್ಕಳು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಚೆನ್ನಾಗಿಯೇ ಇದ್ದಿದ್ದರೆ ಅಕ್ಟೋಬರ್‌ನಲ್ಲಿ ಸೆಮಿಸ್ಟರ್ ಪರೀಕ್ಷೆ ಮುಗಿಯುತ್ತಿತ್ತು. ಈಗ ತರಗತಿ ಆರಂಭಿಸಿದರೆ ಮಾರ್ಚ್ ವೇಳೆಗೆ ಪರೀಕ್ಷೆ ಬರೆಯಬಹುದು. ಆದರೆ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ವ್ಯವಸ್ಥೆ ಇಲ್ಲದೆ ಪಾಠ ಹೇಳುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net