

ಹಾಸನ: ಕರೊನಾ ಕಾರ್ಮೋಡದ ನಡುವೆ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ತಯಾರಿ ನಡೆದಿದ್ದು ಪಟಾಕಿ ಖರೀದಿ ಜೋರಾಗಿದೆ.
ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ 36 ಪಟಾಕಿ ಅಂಗಡಿಗಳನ್ನು ತೆರೆಯಲಾಗಿದೆ. ಕಳೆದ ವರ್ಷ 46 ಅಂಗಡಿಗಳಿದ್ದವು. ಸುರ್ ಸುರ್ ಬತ್ತಿ, ಹೂವಿನ ಕುಂಡ, ಹೂ ಚಕ್ರ, ಫ್ಯಾಮಿಲಿ ಐಟಂ, ರಾಕೆಟ್, ಸ್ಪಾರ್ಕ್ಸ್, ಬಿಜಿಲಿ, ಪೆನ್ಸಿಲ್, ಹನುಮಾನ್ ಬಾಲ ಹೀಗೆ ಅನೇಕ ಬಗೆಯ ಪಟಾಕಿಗಳ ಖರೀದಿ ಜೋರಾಗಿತ್ತು. ನ. 12 ರಿಂದ 17ರ ವರೆಗೆ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ವಾಯು ಮಾಲಿನ್ಯ ಹಾಗೂ ಕರೊನಾ ಹಬ್ಬುವ ಆತಂಕದಿಂದ ಈ ವರ್ಷ ಪಟಾಕಿ ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಪರಿಸರ ಪ್ರೇಮಿ ಪಟಾಕಿ ಮಾರಾಟ ಮಾಡುವುದಾಗಿ ವರ್ತಕರು ಮಾತುಕೊಟ್ಟ ಹಿನ್ನೆಲೆಯಲ್ಲಿ ಹಲವು ನಿಬಂಧನೆಗಳೊಂದಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಾರದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ವ್ಯಾಪಾರ ತುಂಬಾ ನೀರಸವಾಗಿತ್ತು. ಹಬ್ಬದ ಹಿಂದಿನ ದಿನವಾದ ಭಾನುವಾರ ವ್ಯಾಪಾರ ಚೇತರಿಕೆ ಕಂಡಿತ್ತು. ಮಕ್ಕಳು, ಯುವಕರು ಪಟಾಕಿಗಳನ್ನು ಖರೀದಿಸಿದರು.
ಕೋವಿಡ್-19 ಹಿನ್ನೆಲೆ ಪಟಾಕಿ ಮಾರಾಟಕ್ಕೆ ಸರ್ಕಾರ ಹೊರಡಿಸಿರುವ ಆದೇಶದಿಂದ ಗೊಂದಲ ಉಂಟಾಗಿದ್ದು, ಈ ಬಾರಿ ಪಟಾಕಿ ಮಾರಾಟ ಶೇ. 30 ರಷ್ಟು ಕುಸಿತವಾಗಿದೆ ಎಂದು ವ್ಯಾಪಾರಿ ರಮೇಶ್ ಬಾಬು ಬೇಸರ ವ್ಯಕ್ತಪಡಿಸಿದರು.
ದಿಪಾವಳಿ ಹಬ್ಬಕ್ಕೂ ಹಿಂದಿನ ನಾಲ್ಕೈದು ತಿಂಗಳಿನಿಂದ ಪಟಾಕಿ ತರಿಸಲು ತಯಾರಿ ಮಾಡಿಕೊಳ್ಳುತ್ತೇವೆ. ಅನೇಕರು ಒಡವೆ ಅಡವಿಟ್ಟು, ಬಡ್ಡಿ ಸಾಲ ಮಾಡಿ ಪಟಾಕಿಗೆ ಬಂಡವಾಳ ಹಾಕಿ ತರಿಸಿರುತ್ತಾರೆ. ಆದರೆ ಸರ್ಕಾರ ಆರಂಭದಲ್ಲಿ ಪಟಾಕಿಗಳನ್ನೇ ಸಂಪೂರ್ಣವಾಗಿ ನಿಷೇಧಿಸಿತ್ತು. ಬಳಿಕ ಹಬ್ಬಕ್ಕೆ ನಾಲ್ಕು ದಿನ ಬಾಕಿ ಇರುವಾಗ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಅನುಮತಿ ನೀಡಿತು. ಇದರಿಂದ ನಷ್ಟ ಉಂಟಾಗಿದೆ ಎಂದು ಬಾಲಕೃಷ್ಣ ಹೇಳಿದರು.