

ಹಾಸನ: ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜೆಡಿಎಸ್ ಶಾಸಕರಿಗೆ ಊಟದ ವ್ಯವಸ್ಥೆಯಲ್ಲಿ ಗೊಂದಲವಾಗಿದ್ದರೆ ನಾನು ಎಲ್ಲರ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ಡೇರಿ ವೃತ್ತದಿಂದ ಬೇಲೂರು ರಸ್ತೆ ಸಂಪರ್ಕಿಸುವ ವರ್ತುಲ ರಸ್ತೆಗೆ ಬುಧವಾರ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯ ಬಳಿಕ 15 ಜನರಿಗೆ ಊಟದ ವ್ಯವಸ್ಥೆಯನ್ನು ನಾನೇ ಮಾಡಿದ್ದೆ. ಆದರೆ ಸಣ್ಣ ವಿಚಾರ ಶಾಸಕ ಶಿವಲಿಂಗೇಗೌಡರ ಆಕ್ರೋಶಕ್ಕೆ ಕಾರಣವಾಗುತ್ತದೆಂದು ಗೊತ್ತಿರಲಿಲ್ಲ. ಊಟದ ವಿಚಾರದಲ್ಲಿ ರಾಜಕೀಯ ಮಾಡುವಷ್ಟು ಕೀಳು ಮನಸ್ಸು ನನ್ನದಲ್ಲ. ಈ ಕುರಿತು ಅವರಿಗೆ ಬೇಜಾರಾಗಿದ್ದರೆ ಕ್ಷಮೆ ಕೇಳುತ್ತೇನೆ. ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದರು.
ರಾಜಕಾರಣದ ಹೊರತಾಗಿ ಎಲ್ಲರೂ ಅಣ್ಣ- ತಮ್ಮಂದಿರಂತೆ ಇದ್ದೇವೆ. ನಾನು ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಅವರ ಮನೆಗೆ ಹೋಗುತ್ತೇನೆ. ಅವರೂ ನಮ್ಮ ಮನೆಗೆ ಬಂದು ಊಟ ಮಾಡಲಿ. ಸ್ನೇಹ ಸಂಬಂಧ ಉಳಿಯಲಿ ಎಂದು ಅಪೇಕ್ಷೆಪಟ್ಟರು.
ಮುಂದಿನ ಸಿಎಂ ಯಡಿಯೂರಪ್ಪ: ಶಾಸಕ ಉಮೇಶ್ ಕತ್ತಿ ಅವರಿಗೆ ರಾಜಕೀಯದಲ್ಲಿ ಆಗಿರುವ ಅನುಭವದಷ್ಟು ನನಗಿನ್ನೂ ವಯಸ್ಸಾಗಿಲ್ಲ. ಹೀಗಾಗಿ ಹಿರಿಯರ ರಾಜಕೀಯ ನಡೆಯ ಕುರಿತು ಮಾತನಾಡುವುದಿಲ್ಲ. ಆದರೆ 2023ರ ಚುನಾವಣೆ ಬಳಿಕವೂ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗ ಆ ಸ್ಥಾನವನ್ನು ಕೆ.ಗೋಪಾಲಯ್ಯ ವಹಿಸಿಕೊಂಡಿದ್ದು, ಅವರೂ ಜಿಲ್ಲೆಗೆ ಒಳ್ಳೆಯದು ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶೀಘ್ರದಲ್ಲೇ ಪರಿಹಾರ: ವರ್ತುಲ ರಸ್ತೆಗೆ ಭೂಮಿ ನೀಡಿರುವ ರೈತರಿಗೆ ಶೀಘ್ರದಲ್ಲೇ ಪರಿಹಾರ ಕೊಡಿಸಲಾಗುವುದು. ಈ ಹಿಂದೆ ಅಧಿಕಾರ ನಡೆಸಿದವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. 25 ವರ್ಷಗಳಿಂದ ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಅನ್ಯಾಯ ಮಾಡಿಕೊಂಡೆ ಬಂದಿದ್ದಾರೆ. ಆ ಎಲ್ಲ ಲೋಪಗಳನ್ನು ಸರಿಪಡಿಸಲು ಕ್ಷೇತ್ರದ ಜನ ನನಗೆ ಬೆಂಬಲಿಸಿದ್ದು ಅವರ ಋಣ ತೀರಿಸುತ್ತೇನೆ ಎಂದರು.
ಐದು ವರ್ಷ ಶಾಸಕನಾಗಿ ಯಾವ ಯಾವ ಕೆಲಸ ಮಾಡಿದ್ದೇನೆಂಬ ದಾಖಲೆ ಇಟ್ಟುಕೊಂಡು ಮುಂದಿನ ಚುನಾವಣೆಗೆ ಪ್ರಚಾರ ಮಾಡುತ್ತೇನೆ. ಮತಕ್ಕಾಗಿ ಮನೆ ಮನೆಗೆ ತೆರಳಿದಾಗ ಮತದಾರರಿಗೆ ಉತ್ತರ ನೀಡಲು ನಾನು ಸಮರ್ಥನಾಗುತ್ತೇನೆ ಎಂದರು.