ಭಾಷೆ ಎಂದಿಗೂ ನಿಂತ ನೀರಾಗದಿರಲಿ

23_HSN_04
Published on

ಸಕಲೇಶಪುರ: ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ಸಾಗಲಿ ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ಹೇಳಿದರು.

ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ಇಂದು ಜಗತ್ತಿನ ಶ್ರೇಷ್ಠ ಭಾಷೆಯಾಗಲು ಮಹನೀಯರ ಕೊಡುಗೆ ಅಮೋಘ. ಭಾಷೆ ಎಂದು ನಿಂತ ನೀರಾಗಬಾರದು. ಭಾಷೆ ಸಮೃದ್ಧಗೊಳ್ಳಲು ನಿರಂತರ ಹೊಸಪದಗಳ ಜೋಡಣೆಯಾಗಲೇ ಬೇಕು. ಆಗ ಮಾತ್ರ ಭಾಷೆ ಬೆಳೆಯಲು ಸಾಧ್ಯ. ಇಂತಹ ಕೆಲಸ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ, ಇಂದು ನಗರಗಳ ಸಮ್ಮೇಳನ ಆಯೋಜಿಸಿ ಜನರನ್ನು ಸೇರಿಸುವುದು ಸಾಹಸದ ಕೆಲಸ. ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ಪಲ್ಪ ಸಾಹಿತ್ಯದ ಬಗ್ಗೆ ಅಭಿಮಾನಿಗಳಿರುವ ಕಾರಣ ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಹೆಸರಿದ್ದರಷ್ಟೇ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತಿಗಳ ಮನಸ್ಥಿತಿ ಬದಲಾಗಬೇಕು ಎಂದು ಬೇಸರ ಹೊರಹಾಕಿದರು.ತಹಸೀಲ್ದಾರ್ ಮೇಘನಾ ನಾಡ ಧ್ವಜಾರೋಹಣ ನೆರವೇರಿಸಿದರೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಅದ್ದೂರಿ ಮೆರವಣಿಗೆ: ಧ್ವಜಾರೋಹಣ ನೆರವೇರಿಸಿದ ನಂತರ ಹೆತ್ತೂರು ಗ್ರಾಮ ದೇವತೆ ಸತ್ಯಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ, ಸಮ್ಮೇಳನಾಧ್ಯಕ್ಷೆ ಶೈಲಾಜಾ ಹಾಸನ್, ಸಕಲೇಶಪುರ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಹೆತ್ತೂರು ಘಟಕದ ಅಧ್ಯಕ್ಷ ರವಿಕುಮಾರ್ ಹೆತ್ತೂರು ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ರಥದಲ್ಲಿ ಅಸೀನಗೊಳಿಸಲಾಯಿತು. ಮಲೆನಾಡು ಸುಗ್ಗಿಕುಣಿತ, ವಾದ್ಯ ಹಾಗೂ ಹಾಸನದ ಸುಗ್ಗಿಬುಗ್ಗಿ ತಂಡದಿಂದ ವೀರಗಾಸೆ ಕುಣಿತದೊಂದಿಗೆ ಸಮ್ಮೇಳನಾಧ್ಯಕ್ಷರನ್ನು ದೇವಸ್ಥಾನದಿಂದ ಗ್ರಾಮದ ಮುಖ್ಯಬೀದಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಹತ್ತಾರು ಬೈಕ್ ಸವಾರರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧೆಡೆಯಿಂದ ಬಂದಿದ್ದ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

ವ್ಯಂಗ್ಯ ಚಿತ್ರ ಪ್ರದರ್ಶನ: ಸಮ್ಮೇಳನದ ಆವರಣದಲ್ಲಿ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ವತಿಯಿಂದ ವ್ಯಂಗ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಬಟ್ಟೆ, ಪುಸ್ತಕ, ಹಣ್ಣು-ಹಂಪಲುಗಳ ಮಳಿಗೆಗಳು ಸಾಹಿತ್ಯಾಭಿಮಾನಿಗಳ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net