

ಹಾಸನ: ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಎಣ್ಣೆ, ಜೂಜು, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯು ಕರ್ನಾಟಕ ಬಜೆಟ್ ಪುಸ್ತಕದಲ್ಲಿ ಇಲ್ಲ. ದೆಹಲಿ ಬಜೆಟ್ ಬುಕ್‌ನಲ್ಲಿದೆ. ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಜ್ಯದ ಐದು ಗ್ಯಾರಂಟಿಗಳು ಮುಂದುವರೆದಿದ್ದರೂ, ಹಾಸನ ಜಿಲ್ಲೆಗೆ ಯಾವುದೂ ಸಿಕ್ಕಿಲ್ಲ. ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ ಗಾಂಜಾ ಗ್ಯಾರೆಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ವ್ಯಂಗ್ಯವಾಡಿದರು.
ಗೌರವಸ್ಥ ಕುಟುಂಬಗಳು ಬದುಕಲು ಆಗುತ್ತಿಲ್ಲ. ಮಟ್ಕಾ ಜೂಜು, ಮದ್ಯ ಸೇವನೆಯಿಂದ ಜನರ ಮನೆಗಳ ಹೆಣ್ಣು ಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ. ಕರ್ತವ್ಯದಲ್ಲಿರುವಾಗಲೇ ಕೆಲವು ಪೊಲೀಸರು ಸಂಜೆ ಏಳು ಗಂಟೆಗೆ ಎಣ್ಣೆ ಹಾಕ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೆಳಮಟ್ಟದ ಅಧಿಕಾರಿಗಳು ಅವರ ನಿಯಂತ್ರಣದಲ್ಲಿಲ್ಲ. ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋಗಿ ಕುಡಿಯಲಿ ನಾನು ಬೇಡ ಅನ್ನಲ್ಲ. ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕುತ್ತಾರೆ. ದೂರು ಕೊಡಲು ಬಂದವರನ್ನು ಬಾಯಿಗೆ ಬಂದಂತೆ ಬೈಯ್ತರೆ. ಇದಕ್ಕೆಲ್ಲ ಎಸ್ಪಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಈ ಬಜೆಟ್ ನಲ್ಲಿ ತೋಟಗಾರಿಕೆ ಕಾಲೇಜು ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಫ್ಲೈಓವರ್‌ಗೆ ಅನುದಾನ ನಿರೀಕ್ಷಿಸಿದ್ದರೂ, ಬಜೆಟ್‌ನಲ್ಲಿ ಏನೂ ಸಿಕ್ಕಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳಿಗೆ ಮುಂದುವರಿದ ಅನುದಾನ ನೀಡಲಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂ. ನೀಡಬೇಕಿತ್ತು, ಆದರೆ ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಯಾವ ಯೋಜನೆ ಬೇಕು ಅದನ್ನು ತರುವ ಶಕ್ತಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅಲ್ಪಸಂಖ್ಯಾತರು ವಾಸಿಸುವ ರಸ್ತೆಗಳ ನಿರ್ಮಾಣ ಮಾಡಲು ಹಣ ನೀಡಬಹುದಿತ್ತು. ಆದರೆ ಆ ಪ್ರದೇಶಗಳ ಕಡೆಗಣನೆ ಮಾಡಲಾಗಿದೆ. ಕನಿಷ್ಠ 1,000 ವಸತಿ ಗೃಹಗಳನ್ನಾದರೂ ಮಂಜೂರು ಮಾಡಬಹುದಿತ್ತು. ಹಾಸನ ಮಹಾನಗರ ಪಾಲಿಕೆಯಾಗಿ ಘೋಷಣೆಯಾಗಿದ್ದರೂ, ಅದರ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಮುಂದಿನ ಚುನಾವಣೆಗೆ ಹಾಸನ ಮಹಾನಗರ ಪಾಲಿಕೆ ಆಗಬಹುದು. ಆದರೆ ಬೆಳವಣಿಗೆಗೆ ಹಣವೇ ಇಲ್ಲ. ಈ ಸರ್ಕಾರ ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಸಹಿಸಲಾರದು ಎಂದು ದೂರಿದರು.
ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಉಪಸ್ಥಿತರಿದ್ದರು.