ನಕ್ಷತ್ರ ಆಮೆ ಮಾರಾಟಕ್ಕೆ ಮುಂದಾಗಿದ್ದ ಇಬ್ಬರ ಬಂಧನ, ನಾಲ್ವರು ಪರಾರಿ

WhatsApp Image 2021-01-06 at 12.58.12 PM
Published on

ಚನ್ನರಾಯಪಟ್ಟಣ:ತಾಲೂಕಿನ ಬಾಗೂರು ಹೋಬಳಿ ತಿಮ್ಲಾಪುರ ಗ್ರಾಮದ ಗಡಿಯಲ್ಲಿ ನಕ್ಷತ್ರ ಆಮೆ ಹಿಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಬಂಧಿಸಿ ಒಂದು ಆಮೆ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿಯ ನಿವೃತ್ತ ಶಿಕ್ಷಕ ಜಯಣ್ಣ (62) ಹಾಗೂ ಆನೇಕಲ್ ತಾಲೂಕು ಜಿಗಣಿ ಗ್ರಾಮದ ರಮೇಶ್ (49) ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಪರಾರಿಯಾಗಿದ್ದಾರೆ. ಅವರನ್ನು ಚೌಡೇನಹಳ್ಳಿ ದುರ್ಗಪ್ಪ, ಮೂರ್ತಿ, ಶಿವು ಹಾಗೂ ಅಣ್ಣಪ್ಪ ಎಂದು ಗುರುತಿಸಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ವಲಯ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ನಕ್ಷತ್ರ ಆಮೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕೊಂದನ್ನು ವಶಪಡಿಸಿಕೊಳ್ಳಲಾಗಿದೆ.

ವಲಯ ಅರಣ್ಯಾಧಿಕಾರಿ ಎಚ್.ಆರ್. ಹೇಮಂತ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿ ಮಂಜುನಾಥ್, ಕರಿಗೌಡ, ಲೋಕೇಶ್, ದೇವರಾಜ್, ಯೋಗೇಶ್, ವಿನೋದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net