

ಹಾಸನ: ಚನ್ನರಾಯಪಟ್ಟಣ ಪಿಎಸ್‌ಐ ಕಿರಣ್‌ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆ ಪೂರ್ಣಗೊಂಡಿದ್ದು ಅವರಿಗೆ ರಾಜಕೀಯ ಹಿನ್ನೆಲೆಯವರ ಕರೆಗಳು ಬಂದಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಹೇಳಿದರು.
ಚನ್ನರಾಯಪಟ್ಟಣದಲ್ಲಿ ನಡೆದ ನಿರಂತರ ಅಪರಾಧ ಕೃತ್ಯಗಳಿಂದ ಒತ್ತಡಕ್ಕೆ ಸಿಲುಕಿದ್ದ ಕಿರಣ್‌ಕುಮಾರ್ ನೇಣಿಗೆ (ಜುಲೈ 31) ಶರಣಾದರು. ಅರಸೀಕೆರೆ ಡಿವೈಎಸ್ಪಿ ನಾಗೇಶ್ ನೇತೃತ್ವದಲ್ಲಿ ನಡೆದ ತನಿಖೆ ಪೂರ್ಣಗೊಂಡಿದ್ದು ನನಗೆ ತಲುಪಿದೆ. ಅದನ್ನು ಪೂರ್ತಿ ಓದಿದ ಬಳಿಕ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ನಿರಂತರ ಕೊಲೆ ಸಂಭವಿಸಿದ್ದರಿಂದ ಸಾಕಷ್ಟು ಜನರು ಅವರಿಗೆ ಕರೆ ಮಾಡಿದ್ದರು. ಜುಲೈ 30 ರಿಂದ ಅವರ ಮೊಬೈಲ್‌ಗೆ ಸಾಕಷ್ಟು ಕರೆಗಳು ಬಂದಿವೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳೆಂದರೆ ನಾನು ಒಂದು ಬಾರಿ ಕರೆ ಮಾಡಿದ್ದೆ. ಉಳಿದಂತೆ ಪತ್ರಕರ್ತರು, ಸ್ನೇಹಿತರು, ಪತ್ನಿ ಹಾಗೂ ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಅವರನ್ನು ಸಂಪರ್ಕಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಇಷ್ಟೊಂದು ಅಪರಾಧ ಕೃತ್ಯಗಳು ನಡೆಯುತ್ತಿದೆಯಲ್ಲ ಎಂಬುದರ ಕುರಿತಾಗಿ ಬಹುತೇಕರು ಮಾತನಾಡಿದ್ದಾರೆ. ಇದರಿಂದ ಬೇಜಾರಾಗಿ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಸಲ್ಲಿಕೆಯಾಗಿರುವ ವರದಿಯನ್ನು ಸಂಪೂರ್ಣವಾಗಿ ಅಭ್ಯಸಿಸಿ ವಿವರಿಸುತ್ತೇನೆ. ಯಾವುದೇ ವಿಳಂಬವಿಲ್ಲದೆ ತನಿಖೆ ಪೂರ್ಣಗೊಂಡಿದೆ ಎಂದರು.