

ಅರಕಲಗೂಡು: ತಾಲೂಕಿನ 35 ಗ್ರಾಮ ಪಂಚಾಯಿತಿಗಳಿಗೆ ಡಿ. 22ರಂದು ನಡೆಯುವ ಚುನಾವಣೆಯನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸವಾಲಾಗಿ ಸ್ವೀಕರಿಸಿದ್ದರೆ ನಾಯಕ್ವದ ಕೊರತೆಯಿಂದಾಗಿ ಕಾಂಗ್ರೆಸ್ ಮಂಕಾಗಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅರಕಲಗೂಡು ತಾಲೂಕಿನಲ್ಲಿ ಈಗ ಅಸ್ತಿತ್ವವೇ ಇಲ್ಲದಂತಾಗಿದೆ. ಗ್ರಾಪಂ ಚುನಾವಣೆಗೆ ಇನ್ನೊಂದೆ ದಿನ ಬಾಕಿ ಇದ್ದು ಭಾನುವಾರ ವಿವಿಧ ಪಕ್ಷಗಳ ಬೆಂಬಲಿಗರ ಪ್ರಚಾರದ ಅಬ್ಬರ ಜೋರಾಗಿತ್ತು. ಜೆಡಿಎಸ್, ಬಿಜೆಪಿ ಬೆಂಬಲಿಗರ ಪ್ರಚಾರದ ನಾಗಾಲೋಟದ ಮಧ್ಯೆ ಕಾಂಗ್ರೆಸ್ ಪ್ರಚಾರ ವೈಖರಿ ಕ್ಷೀಣಿಸಿದೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿದೆ.
ಮಾಜಿ ಸಚಿವ ಎ. ಮಂಜು ಅವರ ಕಾರಣಕ್ಕಾಗಿ ಅಪಾರ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿರುವುದು ಕಾಂಗ್ರೆಸ್ ಸೊರಗಲು ಕಾರಣವಾಗಿದೆ.
ತಾಲೂಕಿನಲ್ಲಿ ಈವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ತಲಾ ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಂತೆಯೇ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕವಾಗಿ ಅಹಿಂದ ಮತಗಳಿದ್ದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು.
ಕಳೆದ ಲೋಕಸಭಾ ಚುನಾವಣೆ ವೇಳೆ ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ನಂತರ ಪಕ್ಷದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಕಾರಣ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆ ಸಪ್ಪೆಯಾಗಿ ಗೋಚರಿಸುತ್ತಿದೆ.