

ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಬೊಮ್ಮನಹಳ್ಳಿ ಗ್ರಾಮದ 52 ಮತದಾರರನ್ನು ಕೂಗಳತೆ ಬಸವಾಪಟ್ಟಣ ಪಂಚಾಯಿತಿಯಿಂದ ಕಿತ್ತು ದೂರದ ಗ್ರಾಮ ಪಂಚಾಯಿತಿ ರುದ್ರಪಟ್ಟಣ ವಾರ್ಡ್ ಗೆ ಸೇರಿಸಿರುವುದರಿಂದ ಬೇಸತ್ತು ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಕಳೆದ ಬಾರಿ ನಡೆದ ಗ್ರಾಪಂ ಚುನಾವಣೆ ವೇಳೆ ಬೊಮ್ಮನಹಳ್ಳಿ ಗ್ರಾಮದ ಮತದಾರರನ್ನು ಒಂದು ಕಿಮೀ ಹತ್ತಿರದ ಬಸವಾಪಟ್ಟಣ ಗ್ರಾಮ ಪಂಚಾಯಿತಿಯಿಂದ ತೆಗೆದು ಕಾವೇರಿ ನದಿ ಅಚೆಗಿರುವ ದೂರದ ರುದ್ರಪಟ್ಟಣ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಮಾಡಲಾಯಿತು. ಈ ಕ್ರಮವನ್ನು ವಿರೋಧಿಸಿ ಕಳೆದ ಬಾರಿಯ ಗ್ರಾಪಂ ಚುನಾವಣೆ ಬಹಿಷ್ಕರಿಸಲು ಮತದಾರರು ನಿರ್ಧರಿಸಿದ್ದರು. ಅಂದು ಶಾಸಕರಾಗಿದ್ದ ಎ. ಮಂಜು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಮುಂದಿನ ಚುನಾವಣೆ ಹೊತ್ತಿಗೆ ಬಸವಾಪಟ್ಟಣ ಪಂಚಾಯಿತಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಯಶಸ್ವಿಯಾಗಿದ್ದರು.
ಆದರೆ ಈ ಬಾರಿಯೂ ತಮ್ಮೂರಿನ ಮತದಾರರನ್ನು ರುದ್ರಪಟ್ಟಣದಿಂದ ಬಸವಾಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ವರ್ಗಾವಣೆ ಮಾಡಿಸಿಲ್ಲ. ಹೀಗಾಗಿ ತಾವು ಡಿ. 22ರಂದು ನಡೆಯುವ ಗ್ರಾಪಂ ಚುನಾವಣೆಯಿಂದ ದೂರವುಳಿಯಲು ನಿರ್ಧರಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಬಸವಾಪಟ್ಟಣ ಪಂಚಾಯಿತಿಗೆ ಕೂಗಳತೆ ದೂರದಲ್ಲಿದೆ. ರುದ್ರಪಟ್ಟಣಕ್ಕೆ ಐದಾರು ಕಿಮೀ ವರೆಗೆ ಕೊಲ್ಲಿಯ ದುರ್ಗಮ ಹಾದಿಯಲ್ಲಿ ನಡೆದು ಕಾವೇರಿ ಹೊಳೆ ದಾಟಿ ಹೋಗಬೇಕು. ರಾಮನಾಥಪುರ ಸೇತುವೆ ಕಡೆ ಸಾಗಲು ೨೫ ಕಿಮೀ ಸುತ್ತಿ ಬಳಸಬೇಕು. ದೂರದ ರುದ್ರಪಟ್ಟಣ ಪಂಚಾಯಿತಿ ವತಿಯಿಂದ ನಮ್ಮೂರಿಗೆ ಏನೊಂದು ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಊರಿಗೆ ರಸ್ತೆ ಇಲ್ಲ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸರಿಯಿಲ್ಲ. ಆದರೂ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗೆ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಆಮೀಷಗಳನ್ನು ನೀಡಲು ಬರುತ್ತಿದ್ದಾರೆ.
ಇದಕ್ಕೆಲ್ಕ ಗ್ರಾಮಸ್ಥರು ಕಿವಿಗೊಡದೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ಊರಿನ ಮಂಜೇಗೌಡ, ದೊಡ್ಡೇಗೌಡ, ರೇಣುಕಾ, ಮಂಜುಳಾ, ರವಿಕುಮಾರ್ ಬೇಸರದಿಂದ ಹೇಳಿದರು.
ಮತ್ತೊಂದೆಡೆ ರುದ್ರಪಟ್ಟಣ ಗ್ರಾಮದ ಕೆಲ ವಿರೋಧಿಗಳು ನಮ್ಮೂರಿಗೆ ಮತದಾನ ಮಾಡಲು ಬಂದರೆ ನೆಟ್ಟಗಿರುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ಅಧಿಕಾರಿಗಳು ಸಹ ಇತ್ತ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.