ಮಿನಿ ಬಾರ್‌ಗಳಾದ ಗೂಡಂಗಡಿ!

04-11-2020 Alur news p01
Published on


ಹಾಸನ: ಆರೋಗ್ಯ ಹದಗೆಟ್ಟರೆ ಯಾವ ಅಂಗಡಿಯಲ್ಲೂ ತುರ್ತಾಗಿ ಮಾತ್ರೆ ಸಿಗುವುದಿಲ್ಲ, ಆದರೆ ಮದ್ಯ ಮಾತ್ರ ಯಾವುದೇ ತೊಡಕಿಲ್ಲದೆ ಲಭ್ಯ!

ಹೌದು, ಆಲೂರು ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕೇಳಿಬರುವ ಮಾತಿದು. ಕೆ. ಹೊಸಕೋಟೆ ಹೋಬಳಿ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯವಾಹತವಾಗಿ ನಡೆಯುತ್ತಿದ್ದು ಪೆಟ್ಟಿಗೆ ಅಂಗಡಿಗಳೆಲ್ಲ ಮಿನಿ ಬಾರ್‌ಗಳಾಗಿ ಪರಿವರ್ತನೆಯಾಗಿವೆ. ಅಕ್ರಮ ಮದ್ಯ ಮಾರಾಟ ನಿಷೇಧಿಸಿ ಸರ್ಕಾರ ಎಷ್ಟೇ ಕಠಿಣ ಕಾನೂನು ಜಾರಿಗೊಳಿಸಿದರೂ ಎಣ್ಣೆ ಪ್ರಿಯರಿಗೆ ಯಾವುದೇ ಸಮಸ್ಯೆಯಿಲ್ಲ ಎನ್ನುವಂತಾಗಿದೆ.

ಮಲ್ಲಾಪುರ ಗ್ರಾಮದಲ್ಲಿ ಸಿ.ಎಲ್ 2 ಲೈಸೆನ್ಸ್ ಹೊಂದಿದ ಬಾರ್ ಇದೆ. ಆದರೂ ಅನಧಿಕೃತವಾಗಿ ವ್ಯಾಪ್ತಿಯ ಕಡ್ಲೂರು ಗ್ರಾಮದ ಕೂಡಿಗೆ ಹಾಗೂ ಸುತ್ತ್ತಲಿನ ಹಳ್ಳಿಗಳಲ್ಲಿ ಎಲ್ಲೆಡೆ ಮದ್ಯ ದೊರೆಯುತ್ತಿದೆ. ಪಟ್ಟಣ ಪ್ರದೇಶದಲ್ಲಿನ ಮದ್ಯದಂಗಡಿಗಳಿಂದ ಎಲ್ಲ ಬಗೆಯ ಮದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ.

ಕಣ್ಮುಚ್ಚಿ ಕುಳಿತ ಇಲಾಖೆ:
ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಟೊಂಕ ಕಟ್ಟಿ ನಿಂತಿದ್ದರೂ ನಿಯಂತ್ರಣ ಮಾತ್ರ ಅಸಾಧ್ಯವಾಗಿದೆ. ಗ್ರಾಮದ ಇಂತಹ ಹಳ್ಳಿಯಲ್ಲಿ ಇಷ್ಟು ಮದ್ಯ ಸಂಗ್ರಹವಿರುತ್ತದೆ, ಇಷ್ಟೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಇಲಾಖೆ ಅಧಿಕಾರಿಗಳಿಗೆ ಕರಾರುವಕ್ಕಾಗಿ ಗೊತ್ತಿರುತ್ತದೆ. ಆದರೆ ಅವರು ಅದಕ್ಕೆ ಕಡಿವಾಣ ಹಾಕುವುದಿಲ್ಲ. ಅವರಿಗೂ ಇದರಲ್ಲಿ ಪಾಲಿರಬಹುದು ಎಂದು ನಿವಾಸಿಯೊಬ್ಬರು ಆರೋಪಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net