ಅರಕಲಗೂಡು, ಸಕಲೇಶಪುರದಲ್ಲಿ ಗಲಾಟೆ, ಉಳಿದೆಡೆ ಶಾಂತಿಯುತ ಮತದಾನ

22HSN3
Published on

ಹಾಸನ: ಜಿಲ್ಲೆಯ ನಾಲ್ಕು ತಾಲೂಕಿನ 1470 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಮಂಗಳವಾರ ಮಧ್ಯಾಹ್ನ 3ರ ವರೆಗೆ ಶೇ. 70.20 ರಷ್ಟು ಮತದಾನವಾಗಿದೆ.
ಹಾಸನ ಶೇ. 69.53, ಅರಕಲಗೂಡು ಶೇ. 70.70, ಚನ್ನರಾಯಪಟ್ಟಣ ಶೇ. 72.18 ಹಾಗೂ

ಸಕಲೇಶಪುರ ತಾಲೂಕಿನಲ್ಲಿ ಶೇ. 64.60ರಷ್ಟು ಮತದಾನ ನಡೆದಿದೆ. ಸಕಲೇಶಪುರ, ಅರಕಲಗೂಡು ತಾಲೂಕಿನಲ್ಲಿ ಘರ್ಷಣೆ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಮತದಾನ ಪ್ರಕ್ರಿಯೆ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಿ, ಪರಸ್ಪರ ಅಂತರಕ್ಕೆ ಆದ್ಯತೆ ನೀಡಿ ಹಕ್ಕು ಚಲಾಯಿಸಿದರು.

ಹಾಸನ, ಅರಕಲಗೂಡು, ಸಕಲೇಶಪುರ ಹಾಗೂ ಚನ್ನರಾಯಪಟ್ಟಣ ತಾಲೂಕಿನ 125 ಗ್ರಾಮ ಪಂಚಾಯಿತಿಯ 1470 ಸ್ಥಾನಗಳಿಗೆ ಮತದಾನ ನಡೆದಿದ್ದು, 3867 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 896 ಮತಗಟ್ಟೆಗಳಲ್ಲಿ 271 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿತ್ತು. ಡಿ. 30 ರಂದು ಚುನಾವಣಾ ಫಲಿತಾಂಶ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net