

ಹಾಸನ: ಕನ್ನಡಪರ ಚಳವಳಿಗಾರರನ್ನು ವಸೂಲಿ ಹೋರಾಟಗಾರರೆಂದು ಟೀಕಿಸಿರುವ ಶಾಸಕ ಬಸವನೌಡ ಪಾಟೀಲ್ ಯತ್ನಾಳ್ ಅವರಿಗೆ ಡಿ. 5 ರಂದು ಉತ್ತರ ನೀಡಲಾಗುವುದು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಡಿ. 5 ರಂದು ಕರೆ ಕೊಟ್ಟಿರುವ ರಾಜ್ಯ ಬಂದ್‌ಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು. ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಲಾಭ ಪಡೆಯಲು ಸಿಎಂ ಬಿ.ಎಸ್. ಯಡಿಯೂರಪ್ಪ ತರಾತುರಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಸದಾ ಕನ್ನಡಿಗರ ವಿರುದ್ಧ ಕೆಂಡಕಾರುವ ಮರಾಠಿಗರಿಗೆ ಮನ್ನಣೆ ನೀಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಬಿಜೆಪಿ ಸರ್ಕಾರ ಕನ್ನಡ ವಿರೋಧಿ ನಿಲುವು ತಾಳುತ್ತಿದೆ. ಬೆಳಗಾವಿ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುವ ಮರಾಠಿಗರ ಓಲೈಕೆಗೆ ಸರ್ಕಾರ ಮುಂದಾಗಿದೆ. ನ್ಯಾಯಾಲಯ ಹೋರಾಟದ ಮೂಲಕ ಎದುರಾಳಿಗೆ ಶಿಕ್ಷೆ ನೀಡುವ ಬದಲು ಬೇಕಾಬಿಟ್ಟಿ ಅನುದಾನ ನೀಡುತ್ತಿದೆ ಎಂದು ಆರೋಪಿಸಿದರು.