ಗುಡಿ, ಗೋಪುರ ಬದಲು ಆಸ್ಪತ್ರೆ ಕಟ್ಟಿಸಬೇಕಿತ್ತು: ಶ್ವೇತಾ ದೇವರಾಜ್

29HSN1
Published on

ಹಾಸನ: ಡಾ. ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಗುಡಿ ಗೋಪುರಗಳನ್ನು ಕಟ್ಟಿಸುವ ಬದಲು ಆಸ್ಪತ್ರೆ ಮತ್ತು ಶಾಲೆಗಳನ್ನು ತೆರೆದಿದ್ದರೆ ಕೋವಿಡ್-19ನಂತಹ ಮಾರಕ ಕಾಯಿಲೆಗಳ ವಿರುದ್ಧ ಸಮರ್ಥ ಹೋರಾಟ ನಡೆಸಬಹುದಿತ್ತು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಹೇಳಿದರು.

ನಗರದ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಮಿನಿ ಸಭಾಂಗಣದಲ್ಲಿ ಆಸರೆ ಪೌಂಡೇಶನ್‌ನಿಂದ ಭಾನುವಾರ ಆಯೋಜಿಸಿದ್ದ ಕರೊನಾ ಸೇನಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೇರೆ ದೇಶಗಳಿಗೆ ಹೋಲಿಸಿದರೆ ಕರೊನಾದಿಂದ ಭಾರತ ಸಾಕಷ್ಟು ತೊಂದರೆ ಅನುಭವಿಸಿತು. ಧಾರ್ಮಿಕ ಆಚರಣೆ, ಮೂಢ ನಂಬಿಕೆಗೆ ಆದ್ಯತೆ ನೀಡಿದ ನಾವು ವೈಜ್ಞಾನಿಕತೆ ನಂಬಲಿಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕೋವಿಡ್ ಪ್ರಭಾವ ಇಳಿಮುಖವಾಗುತ್ತಿದ್ದರೂ, ವಿದೇಶ ಹಾಗೂ ಬೇರೆ ರಾಜ್ಯಗಳಲ್ಲಿ ಎರಡನೇ ಅಲೆ ಆರಂಭವಾಗಿದೆ. ಎಲ್ಲರೂ ಮತ್ತಷ್ಟು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದರು.

ಆರಂಭದ ದಿನಗಳಲ್ಲಿ ಕೋವಿಡ್ ಬಂದಾಗ ಬಹುತೇಕರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದರು. ಅಂತಹ ಸಂದರ್ಭದಲ್ಲಿಯೂ ಕುಟುಂಬದಿಂದ ದೂರ ಇದ್ದು, ಜನಗಳ ಒಳಿತಿಗಾಗಿ ದುಡಿದ ವೈದ್ಯರು, ದಾದಿಯರು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಹಾಗೂ ಪತ್ರಕರ್ತರ ಸೇವೆ ಶ್ಲಾಘನೀಯ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಮಾತನಾಡಿ, ಕರೊನಾ ಸಾಕಷ್ಟು ಜನರಿಗೆ ಉದ್ಯೋಗ ಇಲ್ಲದಂತೆ ಮಾಡಿತು. ಇದರಿಂದ ಅನೇಕರ ಬದುಕು ಬೀದಿಗೆ ಬಂತು. ಅಂತಹ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್, ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾನವಿಯತೆ ಮೆರೆದರು. ಅಂತಹವರಿಗೆ ಧನ್ಯವಾದ ಹೇಳಲೇಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net