

ಹಾಸನ: ನಗರದ ಎಸ್.ಎಂ. ಕೃಷ್ಣ ನಗರಕ್ಕೆ ಹೊಂದಿಕೊಂಡಂತೆ ಮತ್ತೊಂದು ಬೃಹತ್ ಬಡಾವಣೆ ನಿರ್ಮಿಸುವ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗೆ ಭೂಮಿ ನೀಡಲು ರೈತರು ಒಪ್ಪಿಗೆ ಸೂಚಿಸಿದ್ದು, ಶಾಸಕ ಪ್ರೀತಂ ಜೆ. ಗೌಡ ಅವರ ನಿರಂತರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಭೂ ಮಾಲೀಕರ ಸಭೆಯಲ್ಲಿ ಕೆಲ ಷರತ್ತುಗಳೊಂದಿಗೆ ಭೂಮಿ ನೀಡಲು ರೈತರು ಒಪ್ಪಿಗೆ ಸೂಚಿಸಿದರು.
ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ನೂತನ ಬಡಾವಣೆ ನಿರ್ಮಾಣಕ್ಕೆ ಒಳಪಡುತ್ತಿರುವ 1160 ಎಕರೆ ಪ್ರದೇಶದೊಂದಿಗೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 2006-07ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿರುವ 447 ಎಕರೆ ಪ್ರದೇಶವನ್ನು ಹೊಸ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು. ಬೂವನಹಳ್ಳಿ, ಕೆಂಚಟವಳ್ಳಿ, ಗೇಕರವಳ್ಳಿ ಹಾಗೂ ಸಮುದ್ರವಳ್ಳಿ ಗ್ರಾಮಗಳ ಒಟ್ಟು 1160 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಸಭೆಯ ನಿರ್ಣಯ:
ಕೊಳವೆ ಬಾವಿಯೊಂದಕ್ಕೆ 1.25 ಲಕ್ಷ ರೂ., ಕೋಳಿ ಫಾರಂ ಹಾಗೂ ರೇಷ್ಮೇ ಫಾರಂ ಕಳೆದುಕೊಳ್ಳುವ ರೈತರಿಗೆ ಚದರ ಅಡಿಗೆ 20 ಸಾವಿರ ರೂ., ಪ್ರತಿ ತೆಂಗಿನ ಮರಕ್ಕೆ 12 ಸಾವಿರ ರೂ. ನೀಡಲು ನಿರ್ಧರಿಸಲಾಯಿತು. ಒಟ್ಟಾರೆ 1150ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸುಮಾರು 24 ಸಾವಿರ ನಿವೇಶನ ನಿರ್ಮಾಣ ಮಾಡುವ ಉದ್ದೇಶವನ್ನು ಹುಡಾ ಹೊಂದಿದ್ದು, ಅದರಲ್ಲಿ ಭೂ ಮಾಲೀಕರಿಗೆ 12 ಸಾವಿರ ಲಭ್ಯವಾಗುತ್ತದೆ.
ಎಸ್.ಎಂ. ಕೃಷ್ಣ ನಗರ ನಿರ್ಮಾಣ ಬಳಿಕ ಹೊಸ ಬಡಾವಣೆಗೆ ಮುಂದಾಗಿದ್ದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾರ್ವಜನಿಕರಿಂದ ಸುಮಾರು 57 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಹೀಗಾಗಿ ಬೂವನಹಳ್ಳಿ, ಕೆಂಚಟಹಳ್ಳಿ, ಗೇಕರವಳ್ಳಿ ಹಾಗೂ ಸಮುದ್ರವಳ್ಳಿ ಭಾಗದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಶಾಸಕ ಕೆಲ ತಿಂಗಳಿಂದ ಪ್ರಯತ್ನ ನಡೆಸಿದ್ದರು.