ಐವರು ದರೋಡೆಕೋರರ ಬಂಧನ

06 CRP 02 (1)
Published on

ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ನಡೆಸಿದ್ದ ಐವರು ಅಂತಾರಾಜ್ಯ ಆರೋಪಿಗಳನ್ನು ಸೋಮವಾರ ಬಂಧಿಸಿರುವ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು, ನಾಲ್ಕು ಮೊಬೈಲ್, 3 ಸಾವಿರ ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಬಾದಲ್ ಬೋಸ್ಲೆ(28), ಧನು ಆನಂದರಾವ್‌ಕಾಳೆ(25), ಅಕ್ಷಯ ಶಾಜಿ ಕಾಳೆ(19), ಸುಮಿತ್ ಶತ್ರುಜ್ಞ ಕಾಳೆ(19), ತೆಲಂಗಾಣದ ಸುಭಾಷ್ ತಾಯ್ಪಿ(50) ಬಂಧಿತರು. ಆರೋಪಿಗಳು ಮೂಲತಃ ಪ್ಲಾಸ್ಟಿಕ್ ಹೂವಿನ ವ್ಯಾಪಾರಿಗಳಾಗಿದ್ದು, ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
2019 ಜ. 3ರಂದು ರಾತ್ರಿ ತಾಲೂಕಿನ ಬಳದರೆ ಗೇಟ್ ಹತ್ತಿರ ಮದ್ಯ ತುಂಬಿದ್ದ ಟ್ಯಾಂಕರ್ ಚಾಲಕನನ್ನು ಸುತ್ತುವರಿದು ಹಲ್ಲೆ ನಡೆಸಿದ್ದ ದರೋಡೆಕೋರರು, ಮೊಬೈಲ್ ಹಾಗೂ 8 ಸಾವಿರ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು.
2019 ಡಿ. 29ರಂದು ರಾತ್ರಿ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ಬೋರ್‌ವೆಲ್ ಲಾರಿಯನ್ನು ನಿಲ್ಲಿಸಿ ಚಾಲಕ ಮುರುಗನ್ ಹಾಗೂ ಕ್ಲೀನರ್ ಲಾರಿಯಲ್ಲಿಯೇ ಮಲಗಿದ್ದು, ಬೆಳಗ್ಗೆ ಎಚ್ಚರಗೊಂಡಾಗ ಮುರುಗನ್ ಜೇಬಿನಲ್ಲಿದ್ದ 2800 ರೂ. ನಗದು ಹಾಗೂ ಇಬ್ಬರ ಮೊಬೈಲ್‌ಗಳು ಕಳವಾಗಿದ್ದವು.
ದಿನೇ ದಿನೆ ಹೆಚ್ಚುತ್ತಿದ್ದ ಇಂತಹ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದವು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿತ್ತು.
ಸಿಪಿಐ ಬಿ.ಜಿ.ಕುಮಾರ್, ಪಿಎಸ್‌ಐ ಕಿರಣ್‌ಕುಮಾರ್, ಎಎಸ್‌ಐ ಎಚ್.ಸಿ.ಕುಮಾರಸ್ವಾಮಿ, ಸಿಬ್ಬಂದಿ ನಾಗೇಂದ್ರ, ರವೀಶ್, ಪುಟ್ಟರಾಜ್, ಲೋಹಿತ್, ಬೀರಲಿಂಗ ಮೋಹನ್, ಧರಣೀಶ, ತ್ಯಾಗರಾಜ್, ಚಾಲಕರಾದ ಸಂತೋಷ್, ಶಿವರಾಜ್, ಮಧು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net