ಬೆಳ್ಳಂಬೆಳಗ್ಗೆ ಸುಟ್ಟು ಕರಕಲಾಗಿದ್ದ ಕಾರಿನ ಡಿಕ್ಕಿ ನೋಡಿದ ಹಾಸನ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!

Car
Published on

ಹಾಸನ: ಕಾರು ಸಮೇತ ವ್ಯಕ್ತಿಯನ್ನು ಸುಟ್ಟು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಈ ರಸ್ತೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಸಮೀಪದಲ್ಲೇ ಇದೆ...

ದುಷ್ಕರ್ಮಿಗಳು ಮಟ್ಟನವಿಲೆಯಿಂದ ಕಗ್ಗೆರೆಗೆ ಹೋಗೋ ಮಾರ್ಗ ಮಧ್ಯದಲ್ಲಿ ಈ ಕಾರಿಗೆ ಬೆಂಕಿ ಹಚ್ಚಿದ್ದರು. ಆದರೆ, ಈ ಘಟನೆ ಗ್ರಾಮದವರ ಗಮನಕ್ಕೆ ಬಂದಿರಲಿಲ್ಲ. ಬೆಳಗಿನ ಜಾವ ಕಾರಿನ ಬೆಂಕಿ ಉರಿದು ಸ್ಫೋಟಗೊಂಡ ಸದ್ದು ಕೇಳಿ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದರು. ಮೊದಲಿಗೆ ಸುಟ್ಟು ಹೋದ ಕಾರೆಂದು ತಿಳಿದಿದ್ದರು. ಪರಿಶೀಲಿಸಿ ನೋಡಿದಾಗ ಸುಟ್ಟ ಕಾರಿನ ಡಿಕ್ಕಿಯಲ್ಲಿ ಸುಟ್ಟು ಕರಕಲಾದ ಶವವೊಂದು ಕಂಡು ಬಂದಿತ್ತು.

ಆದರೆ, ಶವ ಗಂಡಿನದ್ದೋ ಅಥವಾ ಮಹಿಳೆಯದ್ದೋ ಎಂದು ತಿಳಿಯದ ಮಟ್ಟಿಗೆ ದೇಹ ಸುಟ್ಟುಹೋಗಿದೆ. ಈ ಶವ ಸ್ಥಳೀಯರದ್ದೇ ಯಾರೋದೋ ಸಂಬಂಧಿಸಿದ್ದರಬಹುದೆಂದು ಪೊಲೀಸರು ಊಹಿಸಿದ್ದಾರೆ. ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸುಟ್ಟ ಕಾರು ಟಯೋಟೋ ಇಟಿಯಾಸ್ ಕಾರು ಎಂದು ಗುರುತಿಸಲಾಗಿದೆ. ಆದ್ರೆ ಕೊಲೆಯಾಗಿರೋ ವ್ಯಕ್ತಿ ಯಾರಿರಬಹುದೆಂಬ ಗುರುತು ಪತ್ತೆಯಾಗಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿ 75 ರ ಸಮೀಪ ಘಟನೆ ನಡೆದಿರೋ ಕಾರಣ ಬೆಂಗಳೂರಿನಿಂದ ಆಗಮಿಸಿದ ದುಷ್ಕರ್ಮಿಗಳಿಂದಲೂ ಈ ಕೃತ್ಯ ಆಗಿರಬಹುದೆಂದು ಪೊಲೀಸ್ ಉಹೀಸಿದ್ದಾರೆ. ಆದ್ರೆ ಕಾರಿನ ಡಿಕ್ಕಿಯಲ್ಲಿ ಹಾಕಿ ಸುಟ್ಟು ಹಾಕುವಷ್ಟು ಅಮಾನುಷ ಘಟನೆ ಹಿರಿಸಾವೆ ಜನರಿಗೆ ಆತಂಕ ಉಂಟುಮಾಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net