ಸದಭಿರುಚಿಯ ಅರಿವು ಕಾರ್ಯಕ್ರಮ ಪ್ರಸಾರ ಮಾಡಿ

6HSN4
Published on

ಹಾಸನ: ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ಕೆಲಸ ಕೇಬಲ್ ನೆಟ್‌ವರ್ಕ್ ಟಿವಿಗಳಿಂದ ಆಗಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೇಬಲ್ ಟಿವಿ ನೆಟ್‌ವರ್ಕ್ ಕಾಯ್ದೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿ ಲಕ್ಷಾಂತರ ಜನರು ಕೇಬಲ್ ಟಿವಿ ವೀಕ್ಷಿಸುವುದರಿಂದ ಸದಭಿರುಚಿಯ ಅರಿವು ಕಾರ್ಯಕ್ರಮ ಪ್ರಸಾರ ಮಾಡುವುದು ಅಗತ್ಯ. ಜಿಲ್ಲೆಯಲ್ಲಿರುವ ಎಲ್ಲ ಕೇಬಲ್ ವಾಹಿನಿಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಕಾರ್ಯಕ್ರಮ, ಆರೋಗ್ಯ ಸೌಲಭ್ಯ ಮಾಹಿತಿ ಒದಗಿಸಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.


ಎಲ್ಲ ಇಲಾಖಾ ಅಧಿಕಾರಿಗಳಿಗೂ ಈ ಬಗ್ಗೆ ತಿಳಿಸಿ ಪ್ರಮುಖ ವಿಷಯಗಳ ಬಗ್ಗೆ ಹಾಗೂ ಸರ್ಕಾರದ ವಿವಿಧ ಸಹಾಯವಾಣಿಗಳ ಬಗ್ಗೆ ಸ್ಕ್ರಾಲಿಂಗ್ ಹಾಕುವ ಮೂಲಕ ಮತ್ತು ವಿಡಿಯೋ ಸಂದರ್ಶನದ ಮೂಲಕ ಜಾಗೃತಿ ಮೂಡಿಸಬೇಕು ಎಂದರು.


ಎಲ್ಲ ಕೇಬಲ್ ಆಪರೇಟರ್‌ಗಳು ಸಮರ್ಪಕ ಸೇವೆ ಒದಗಿಸಬೇಕು. ಗುಣಮಟ್ಟದ ಸಿಗ್ನಲ್ ನೀಡಬೇಕು. ಗ್ರಾಹಕರ ಶೋಷಣೆ ಮಾಡಬಾರದು. ಟ್ರಾಯ್ ನಿಗದಿಪಡಿಸಿರುವ ಮೊತ್ತವನ್ನಷ್ಟೇ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.


ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಳ್ಳುವಾಗ ಸಾರ್ವಜನಿಕರು ಅದರ ಸತ್ಯಾಸತ್ಯತೆ ಅರಿಯಬೇಕು. ಯಾವುದೇ ಭೀತಿ ಹುಟ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುವ ಸನ್ನಿವೇಶಗಳನ್ನು ಸೃಷ್ಟಿಸಬಾರದು ಎಂದು ಎಚ್ಚರಿಕೆ ನೀಡಿದರು.


ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ ಮಾತನಾಡಿ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಕಾರ್ಯಕ್ರಮ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.


ಮಕ್ಕಳು ಹಾಗೂ ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರ್ಯಕ್ರಮಗಳು ಕೇಬಲ್ ಟಿವಿಯಲ್ಲಿ ಪ್ರಸಾರವಾಗಬಾರದು ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.


ಸಮಿತಿಯ ಸದಸ್ಯ ಕಾರ್ಯದರ್ಶಿ ವಿನೋದ್‌ಚಂದ್ರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಉದಯಕುಮಾರ್, ಸಿ.ಎಂ. ಚಂದ್ರಶೇಖರ್, ಡೆನ್ ಸಂಸ್ಥೆ ಕೆಪಿಎಸ್ ಪ್ರಮೋದ್, ಸಮಾಜ ಸೇವಕರಾದ ರೂಪಾ ಹಾಸನ, ಹಿಮ್ಸ್ ಮನೋವೈದ್ಯ ಡಾ. ಪುನಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net