

ಹಾಸನ: ಸಹಪಾಠಿಗಳು ರೇಗಿಸುತ್ತಿದ್ದರು ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.
ತಾಲೂಕಿನ ಹರುವನಹಳ್ಳಿಯ ಹರ್ಷಿತ್ ಗೌಡ (16) ಮೃತ ದುರ್ದೈವಿ.
ನಗರ ಹೊರವಲಯದ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹರ್ಷಿತ್ ಊರಿಗೆ ತೆರಳಿದ್ದ. ದನ ಮೇಯಿಸಲು ಹೋಗುವುದಾಗಿ ಹೇಳಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಬಾಲಕನ ಮೂಗಿಗೆ ಪೆಟ್ಟು ಬಿದ್ದಿತ್ತು. ಸ್ನೇಹಿತರೆಲ್ಲ ಮೂಗುಹರುಕ ಎಂದು ಕಿಚಾಯಿಸುತ್ತಿದ್ದರು. ಇದೇ ವಿಚಾರವಾಗಿ ಮಾ. 19 ರಂದು ಶಾಲೆಯಲ್ಲಿ ಗಲಾಟೆ ನಡೆದಿತ್ತು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿ ಕಳಿಸಿದ್ದರು. ಇದರಿಂದ ಬೇಸರಗೊಂಡು ಹರ್ಷಿತ್ ಶಾಲೆ ಬಿಟ್ಟು ಮನೆಗೆ ಹೋಗಿದ್ದ. ಮಾನಸಿಕವಾಗಿ ನೊಂದಿದ್ದ ಆತ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.