ಕರೊನಾ 2ನೇ ಅಲೆ ತಡೆಗೆ ಹಿಮ್ಸ್ ಸನ್ನದ್ಧ!

10HSN2A
Published on

ಹಾಸನ: ಚಳಿಗಾಲದಲ್ಲಿ ಕರೊನಾ ಎರಡನೇ ಅಲೆ ಆರಂಭವಾಗಬಹುದು ಎಂಬ ತಜ್ಞರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೋಂಕು ಹರಡುವಿಕೆ ತಡೆಗೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.

400 ಹಾಸಿಗೆಗಳ ಡೆಡಿಕೇಟೆಡ್ ಕೋವಿಡ್-19 ಹಾಸ್ಪಿಟಲ್ (ಡಿಸಿಎಚ್)ಗೆ ಪೂರಕವಾಗಿ ಆಸ್ಪತ್ರೆಯಲ್ಲಿ ಸುಸಜ್ಜಿತ ಪ್ರಯೋಗಾಲಯವೂ ಇದೆ. ದೇಶದಲ್ಲಿ ಕರೊನಾ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಸೋಂಕು ಪತ್ತೆಗೆ ದೇಶದಲ್ಲಿ 50, ರಾಜ್ಯದಲ್ಲಿ ಕೇವಲ 3 ಪ್ರಯೋಗಾಲಯಗಳಿದ್ದವು. ಆ ಪೈಕಿ ಹಾಸನದ ಹಿಮ್ಸ್ ಆಸ್ಪತ್ರೆಯ ಪ್ರಯೋಗಾಲವೂ ಒಂದು. ಪ್ರಾರಂಭದಲ್ಲಿ ಪಕ್ಕದ ಜಿಲ್ಲೆಗಳ ಕರೊನಾ ಶಂಕಿತರ ದ್ರವ ಮಾದರಿಯ ಪರೀಕ್ಷೆ ಹಿಮ್ಸ್ ಆಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ನಡೆಯುತ್ತಿತ್ತು. ಕೇಂದ್ರ ಸರ್ಕಾರದ 1.73 ಕೋಟಿ ರೂ. ನೆರವಿನಿಂದ ಹಿಮ್ಸ್ ಆಸ್ಪತ್ರೆಯಲ್ಲಿ ಪ್ರಾರಂಭವಾದ ವಿಆರ್‌ಡಿಎಲ್ ಪ್ರಯೋಗಾಲಯದಲ್ಲಿ ಪ್ರಾರಂಭದಲ್ಲಿ ದಿನಕ್ಕೆ 300 ಜನರ ಮಾದರಿ ಪರೀಕ್ಷೆ ಮಾಡಲಾಗುತ್ತಿತ್ತು.

ಈಗ ಹೆಚ್ಚುವರಿ ಉಪಕರಣಗಳನ್ನು ಅಳವಡಿಸಕೊಂಡ ನಂತರ ದಿನಕ್ಕೆ 2500 ರಿಂದ 3000 ಮಾದರಿ ಪರೀಕ್ಷೆ ಮಾಡಬಹುದಾಗಿದೆ. ಹಾಗಾಗಿಯೇ ಈಗ ಕರೊನಾ ಶಂಕಿತರ ಶೇ. 113 ರಷ್ಟು ಆರ್‌ಟಿಪಿಸಿಆರ್ ಮಾದರಿಯನ್ನು ಪರೀಕ್ಷೆ ಮಾಡಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಿಮ್ಸ್ ಆಸ್ಪತ್ರೆಯ ಪ್ರಯೋಗಾಲಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

2016ರಲ್ಲಿ ನಿರ್ಮಾಣಗೊಂಡ 5 ಅಂತಸ್ತಿನ ಹಿಮ್ಸ್‌ನ ಬೋಧಕ ಆಸ್ಪತ್ರೆಯ ಹೊಸ ಕಟ್ಟಡಲ್ಲಿ 500 ಹಾಸಿಗೆಗಳ ಸಾಮರ್ಥ್ಯವಿದೆ. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಜಿಲ್ಲಾಡಳಿತ ಬಳಸಿಕೊಂಡಿತು. ಪ್ರಾರಂಭದಲ್ಲಿ 200 ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಾಗಿಡಲಾಗಿತ್ತು. ಆನಂತರ ಪಾಸಿಟಿವ್ ಪ್ರಕರಣಗಳು ದಿನಕ್ಕೆ 500 ಮೀರಿದಾಗ 400 ಹಾಸಿಗೆಗಳನ್ನು ಕರೊನಾ ಸೋಂಕಿತರಿಗೆ ಮೀಸಲಿಡಲಾಯಿತು. ಈಗ ಸಕ್ರಿಯ ಸೋಂಕಿತರ ಸಂಖ್ಯೆ 300 ರ ಆಸುಪಾಸಿನಲ್ಲಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಒಳ ರೋಗಿಗಳ ಚಿಕಿತ್ಸೆಗೆ 300 ಹಾಸಿಗೆಗಳ ಪ್ರತ್ಯೇಕ ಕಟ್ಟಡ ಹಾಗೂ ನ್ಯಾಯಾಲಯದ ಹಳೆ ಕಟ್ಟಡವನ್ನು ಹೊರ ರೋಗಿಗಳ ಚಿಕಿತ್ಸೆಗೆ ಹಿಮ್ಸ್ ಬಳಸಿಕೊಳ್ಳುತ್ತಿದೆ.

ಸಮಪರ್ಕಕ ಆಕ್ಸಿಜನ್ ವ್ಯವಸ್ಥೆ:
ಕರೊನಾ ಸೋಂಕಿತರಿಗೆ ಮೀಸಲಿಟ್ಟ 400 ಹಾಸಿಗೆಗಳಿಗೂ ಆಕ್ಸಿಜನ್ ಅಳವಡಿಕೆಯ ವ್ಯವಸ್ಥೆಯಿದೆ. ಈ 400 ಹಾಸಿಗೆಗಳ ಪೈಕಿ 60 ಹಾಸಿಗೆಗಳ ವೆಂಟಿಲೇಟರ್ ಸೌಲಭ್ಯವಿದೆ. ಈ ಮೊದಲು 28 ಹಾಸಿಗೆಗಳ ವೆಂಟಿಲೇಟರ್ ಸೌಲಭ್ಯವಿದ್ದುದು ರೋಗಿಗಳ ಚಿಕಿತ್ಸೆಗಾಗಿ 60 ವೆಂಟಿಲೇಟರ್ ಸೌಲಭ್ಯಕ್ಕೆ ವಿಸ್ತರಣೆಯಾಗಿದೆ. ಆಸ್ಪತ್ರೆಯಲ್ಲಿ 13 ಸಾವಿರ ಲೀಟರ್ ಆಕ್ಸಿಜನ್ ಸಂಗ್ರಹಣೆಯ 18 ಟ್ಯಾಂಕ್ ಇದೆ. ಆಕ್ಸಿಜನ್ ಪೂರೈಕೆಯ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಮೂರು ದಿನಕ್ಕೊಮ್ಮೆ ಟ್ಯಾಂಕ್‌ಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಪ್ರತಿ ಹಾಸಿಗೆಗೆ ಪೈಪ್ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net