ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ ಖಂಡಿಸಿ ರೈತರಿಂದ ಆಕ್ರೋಶ

Protest0000000000000000000000000
Published on

ಚಿತ್ರದುರ್ಗ:ರೈತ ಹಾಗೂ ಗ್ರಾಹಕ ವಿರೋಧಿ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಯಾವ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಪ್ರೊ.ಎಂ.ಡಿ.ನಂಜುಡಸ್ವಾಮಿ) ಬಣದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಕ್ರಮ ಸೂಕ್ತವಲ್ಲ. ಈ ನಿರ್ಧಾರ ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡಲು ಸರ್ಕಾರಗಳು ಹುನ್ನಾರ ನಡೆಸಲು ಮುಂದಾಗಿವೆ. ಇದನ್ನು ಜಾರಿಗೆ ತರಬಾರದು. ಒಂದು ವೇಳೆ ತಿದ್ದುಪಡಿ ತಂದರೆ, ಈ ಹಿಂದೆ ಮೂರು ಕಾಯ್ದೆ ಹಿಂಪಡೆಯುವುದರ ವಿರುದ್ಧ ದೇಶದಾದ್ಯಂತ ಧರಣಿ ಕೈಗೊಂಡ ಮಾದರಿಯಲ್ಲೇ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.

9 ಕೋಟಿ ಹೆಕ್ಟೇರ್ ಬೆಳೆ ನಾಶ: ಕಳೆದ ಬಾರಿಗಿಂತಲೂ ಪ್ರಸಕ್ತ ಸಾಲಿನಲ್ಲಿ ಶೇ 40ರಷ್ಟು ಹೆಚ್ಚುವರಿ ಮಳೆಯಾಗಿದ್ದು, 9 ಕೋಟಿ ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಸುಮಾರು 3ಸಾವಿರ ಕೋಟಿ ರೂ. ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು ಸೇರಿ ಅನೇಕರ ಮನೆಗಳು ನೆಲಕ್ಕುರುಳಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಸಂಬಂಧಿಕರ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಳಾಗಿರುವ ಬೆಳೆ ತೆಗೆದು ಹಿಂಗಾರು ಬಿತ್ತನೆ ಮಾಡಲು ರೈತರ ಬಳಿ ಹಣ ಇಲ್ಲದಂತಾಗಿದೆ. ಕೂಡಲೇ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಕೋರಿದರು.

ಮುಖಂಡರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಎಂ. ಸದಾಶಿವಪ್ಪ, ರಂಗಪ್ಪ, ರಾಮರೆಡ್ಡಿ, ಎಂ. ಬಸವರಾಜಪ್ಪ, ಎಸ್. ಪ್ರವೀಣ್, ನಾಗರಾಜ್, ಶಿವಮೂರ್ತಿ, ಮಂಜುನಾಥ್, ಗಂಗಾಧರ್, ರಾಜಶೇಖರಪ್ಪ, ವಿ.ಎಚ್. ಶೇಷಣ್ಣರೆಡ್ಡಿ, ಪರಮೇಶ್ವರಪ್ಪ, ಸಿದ್ಧಬಸಪ್ಪ ಇತರರಿದ್ದರು.

Attachments area

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net