ನಾಲ್ಕನೇ‌ ದಿನವೂ ಹಾಸನಾಂಬೆ ದೇಗುಲಕ್ಕೆ ಹರಿದು ಬಂದ ಭಕ್ತಸಾಗರ; ‌ದರ್ಶನ ಪಡೆದ ಮುಸ್ಲಿಂ ಕುಟುಂಬ

hasanambe
Published on

ಹಾಸನ: ಭಾನುವಾರ ರಜಾ ದಿನವಾದ್ದರಿಂದ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಅಂದಹಾಗೆ ಮುಸ್ಲಿಂ ಕುಟುಂಬವೊಂದು ಹಾಸನಾಂಬೆ ‌ದರ್ಶನಕ್ಕೆ ಬಂದಿದ್ದು, ಸರತಿ ಸಾಲಿನಲ್ಲಿ‌ ನಿಂತು ಕುಟುಂಬವು ತಾಯಿಯ ದರ್ಶನ ಪಡೆದಿದೆ.

"ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ಅನೇಕ ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಅಂದುಕೊಂಡಿದ್ದೆವು. ಆದರೆ ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ'' ಎಂದು ಮುಸ್ಲಿಂ ಮಹಿಳೆ ಹಜೀರ ಹರ್ಷ ವ್ಯಕ್ತಪಡಿಸಿದ್ದಾರೆ.

ನಾಳೆ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ನಾಳೆ ಹಾಸನಾಂಬ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ನಾಳೆ ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸಿದ್ದರಾಮಯ್ಯ ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ.

ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವ ಪ್ರವಾಸಿಗರು
ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಈ ಬಾರಿ ವಿಶೇಷವಾಗಿ ಆಯೋಜಿಸಲಾಗಿದ್ದ ಆಗಸದಿಂದ ಹಾಸನ ಹೆಲಿ ಟೂರಿಸಂ, ಪ್ಯಾರಾಸೆಲಿಂಗ್, ಪ್ಯಾರಾ ಮೋಟರಿಂಗ್, ಪ್ಯಾಕೇಜ್ ಸಾರಿಗೆ ಪ್ರವಾಸದಲ್ಲಿ ಬಹುತೇಕ ಮಂದಿ ಭಾಗವಹಿಸಿದ್ದಾರೆ. ಪ್ರತಿ ಬಾರಿಯೂ ಐದರಿಂದ ಆರು ಮಂದಿ ಹೆಲಿಕ್ಯಾಪ್ಟರ್‍ನಲ್ಲಿ ಸಂಚರಿಸಿದ್ದು ಇದುವರೆಗೆ ಒಟ್ಟು 210 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net