ಹಾಸನಾಂಬೆ ದರ್ಶನ ವಿಚಾರದಲ್ಲಿ ನೀತಿ ಬದಲಿಸಿದ ಜಿಲ್ಲಾಡಳಿತ

5HSN5
Published on

ಹಾಸನ: ಆಹ್ವಾನ ಪತ್ರಿಕೆಯಲ್ಲಿ ಹೆಸರಿರುವ ಜಿಲ್ಲೆಯ ಜನಪ್ರತಿನಿಧಿಗಳು ಕುಟುಂಬ ಸಮೇತ ಬಂದು ಹಾಸನಾಂಬೆ ದರ್ಶನ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಸರಳ ಮಹೋತ್ಸವ ಮಾಡಲಾಗುತ್ತಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ. ದೇವಾಲಯ ಗರ್ಭಗುಡಿ ಬಾಗಿಲು ತೆರೆಯುವ ಹಾಗೂ ಹಾಕುವ ದಿನ ಮಾತ್ರ ಆಹ್ವಾನಿತರಿಗೆ ಅವಕಾಶ ನೀಡಲಾಗಿತ್ತು. ಆದರೆ ನಿಗದಿಪಡಿಸಿದ ದಿನದಂದು ಬರಲು ಸಾಧ್ಯವಾಗದವರು ಯಾವುದಾದರೂ ಒಂದು ದಿನ ಬರಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಈ ನಿಯಮ ಆಹ್ವಾನ ಪತ್ರಿಕೆಯಲ್ಲಿರುವ ಜನಪ್ರತಿನಿಧಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ಜಿಲ್ಲೆಯ ಗಣ್ಯರು ನ. 16 ರಂದು ಮಾತ್ರ ಬರಬೇಕು. ಇಲ್ಲವಾದರೆ ದೇವಸ್ಥಾನ ಆವರಣದಲ್ಲಿ ಅಳವಡಿಸಿರುವ ಎಲ್‌ಇಡಿ ಸ್ಕ್ರೀನ್‌ನಲ್ಲೇ ದೇವಿ ದರ್ಶನ ಪಡೆಯಬೇಕು. ಯಾವ ಜನಪ್ರತಿನಿಧಿಗಳು ಒಂದಕ್ಕಿಂತ ಹೆಚ್ಚು ಬಾರಿ ಬರಬಾರದು ಎಂದು ಮನವಿ ಮಾಡಿದರು.

ಹಾಸನಾಂಬೆ ಭಕ್ತನಾಗಿ ಪ್ರತಿವರ್ಷ ಜಾತ್ರೆಗೆ ಬರುತ್ತಿದ್ದ ನಾನು ಈ ಸಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಭಾಗವಹಿಸಿದ್ದು ಖುಷಿ ತಂದಿದೆ ಎಂದು ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net