ಇನ್ಮೇಲೆ ಬೆಳಗ್ಗೆ ಮಧ್ಯಾಹ್ನ ಕುಡಿಯಲ್ಲ, ಅಪ್ಪಿ-ತಪ್ಪಿ ರಾತ್ರಿ ಕುಡಿದರೆ ಮನ್ನಿಸು; ದೇವಿಯ ಸನ್ನಿಧಾನದಲ್ಲಿ ಇದೆಂಥ ಕೋರಿಕೆ?!

hasanamba
Published on

ಹಾಸನ: ವರ್ಷಕ್ಕೊಮ್ಮೆ ಕೆಲವೇ ದಿನಗಳ ಮಟ್ಟಿಗೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದೇವಾಲಯದಲ್ಲಿ ಇದೀಗ ಹುಂಡಿ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಕಾಣಿಕೆ ಹಣದ ಜತೆಗೆ ವಿಧವಿಧದ ಕೋರಿಕೆಯ ಚೀಟಿಗಳೂ ಕಾಣಿಸಿಕೊಂಡಿವೆ.

ಈ ಬಾರಿ ನವೆಂಬರ್ 5ರಿಂದ 16ರ ವರೆಗೆ ದೇವಾಲಯದ ಬಾಗಿಲು ತೆರೆದಿತ್ತು. ಪ್ರತಿ ವರ್ಷ ಹೀಗೆ ಬಾಗಿಲು ಮುಚ್ಚಿದ ಬಳಿಕ ಹುಂಡಿ ಎಣಿಕೆ ನಡೆಯುವುದು ಪದ್ಧತಿ. ಕಳೆದ ವರ್ಷ 3 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು. ಈ ಸಲ ಎಣಿಕೆ ವೇಳೆ ಹುಂಡಿಯಲ್ಲಿ ಹಣದ ಜತೆಗೆ ವಿಭಿನ್ನ ಬೇಡಿಕೆಗಳ ಚೀಟಿಗಳೂ ಸಿಕ್ಕಿವೆ.

ಇನ್ನು ಮುಂದೆ ನಾನು ಬೆಳಗ್ಗೆ ಮಧ್ಯಾಹ್ನ ಕುಡಿಯಲ್ಲ, ಸಂಜೆ ಸ್ವಲ್ಪ ತೆಗೆದುಕೊಳ್ಳುತ್ತೇನೆ. ಅಪ್ಪಿ ತಪ್ಪಿ ಸಂಜೆ ಕುಡಿದರೆ ಮನ್ನಿಸು ಎಂದು ಭಕ್ತರೊಬ್ಬರು ಚೀಟಿ ಬರೆದು ಹುಂಡಿಗೆ ಹಾಕಿ ಕೋರಿಕೊಂಡಿದ್ದಾರೆ. ಒಳ್ಳೆಯ ವರನನ್ನು ಕೊಡು, ಮದುವೆ ಮಾಡಿಸು, ಗಂಡ ಮಕ್ಕಳನ್ನು ಕಾಪಾಡು, ನನ್ನ ಕೆಲಸ ಪರ್ಮನೆಂಟ್​ ಆಗಲಿ ಎಂಬಿತ್ಯಾದಿ ಸ್ವಾರಸ್ಯಕರ ಕೋರಿಕೆಗಳು ದೇವಿಗೆ ಸಲ್ಲಿಕೆ ಆಗಿವೆ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಹಾಸನಾಂಬಾ ದೇವಿಗೆ ಸಾರ್ವಜನಿಕ ದರ್ಶನ ಇರದ ಕಾರಣ ಕಾಣಿಕೆ ಸಂಗ್ರಹದಲ್ಲಿ ಕುಸಿತ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net