

ಹಾಸನ: ನಗರದ ರಿಂಗ್ ರಸ್ತೆಯಲ್ಲಿ ಬುಧವಾರ ರಾತ್ರಿ ಮರಳು ತುಂಬಿದ ಲಾರಿ ಮಗುಚಿ ಕಾರು ಸಂಪೂರ್ಣ ಜಖಂಗೊಂಡಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚಾಲಕ ಮಹಮದ್ ಫರಾಜ್, ತಂದೆ ರೌಸ್ ಷರೀಫ್, ತಾಯಿ ವಹಿದಾ ಸುಲ್ತಾನ ಹಾಗೂ ಪುತ್ರ ಜನ್ನತ್ (2) ಎಂಬುವರಿಗೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ನಿವಾಸಿ ಮಹಮದ್ ಫರಾಜ್ ತಂದೆ, ತಾಯಿ ಹಾಗೂ ಪುತ್ರನೊಂದಿಗೆ ರಾತ್ರಿ 9ರ ಸಮಯದಲ್ಲಿ ಬೇಲೂರಿಗೆ ಹೊರಟಿದ್ದರು. ಅತಿ ವೇಗವಾಗಿ ಬಂದ ಲಾರಿ ಮುಂದೆ ಹೊರಟಿದ್ದ ಜೀಪ್‌ಗೆ ಡಿಕ್ಕಿ ಹೊಡೆದು ನಂತರ ಎದುರಿನಿಂದ ಬಂದ ಕಾರಿನ ಮೇಲೆ ಪಲ್ಟಿಯಾಗಿದೆ. ಜೀಪ್‌ಗೆ ಡಿಕ್ಕಿ ಹೊಡೆದಿದ್ದರಿಂದ ಗಾಬರಿಗೊಂಡ ಲಾರಿ ಚಾಲಕ ಧಾವಂತದಲ್ಲಿ ಸ್ಟೇರಿಂಗ್ ಅನ್ನು ಬಲಕ್ಕೆ ತಿರುಗಿಸಿದ ಪರಿಣಾಮ ಎದುರಿಗೆ ಬಂದ ಕಾರಿನ ಮೇಲೆ ಮಗುಚಿದೆ. ಲಾರಿ ಬೀಳುತ್ತಿದ್ದಂತೆಯೇ ಮಹಮದ್ ಎಲ್ಲರನ್ನೂ ಮತ್ತೊಂದು ಬಾಗಿಲಿನಿಂದ ಕೆಳಕ್ಕೆ ಇಳಿಸಿದ್ದಾರೆ. ಅವಘಡದಲ್ಲಿ ಜೀಪ್ ಚಾಲಕನಿಗೂ ಸ್ವಲ್ಪ ಪೆಟ್ಟಾಗಿದೆ. ಲಾರಿ ಚಾಲಕನ ಅತಿವೇಗ ಹಾಗೂ ಸೆಂಟ್ರಲ್ ಜಾಯಿಂಟ್ ಕಟ್ ಆಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ವಾಹನ ಪಲ್ಟಿಯಾಗುತ್ತಿದ್ದಂತೆ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡೂ ವಾಹನಗಳನ್ನು ತೆರವುಗೊಳಿಸಿ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಾಸನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.