

ಬೆಂಗಳೂರು:
ಸಹಪಾಠಿಯಾಗಿದ್ದ ಹಾಸಾಕೃ ಜೊತೆಯಲ್ಲೇ ಇದ್ದರೂ, ನನಗೆ ಅವರ ಬಗ್ಗೆ ತಿಳಿದಿರಲಿಲ್ಲ. ಗೆಳೆಯನೊಬ್ಬ ಹಾಸಾಕೃ ಅವರ ಒಡನಾಟ ಬೆಳೆಸಿಕೋ ಎಂದು ಹೇಳಿದಾಗಲೇ ನನಗೆ ಈ ಪ್ರಶ್ನಾರ್ಥಕ ವ್ಯಕ್ತಿಯ ಬಗ್ಗೆ ತಿಳಿಯಬೇಕೆಂಬ ಹಂಬಲ ಹೆಚ್ಚಿ ಅವರೊಂದಿಗೆ ಒಟನಾಟ ಬೆಳೆಸಿಕೊಂಡೆ ಎಂದು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟಿ ಹಾಗೂ ರಂಗಕರ್ಮಿ ಆನಂದ ಸಭಾಪತಿ ಹೇಳಿದರು.
ಚಾರುಮತಿ ಪ್ರಕಾಶನವು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ಅಕಾಡಮೆಯ ಆವರಣದಲ್ಲಿನ ಭಾನು ನೆನಪಿನ ನಾಣಿ ಅಂಗಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎನ್.ಕೆ. ಮೋಹನ್ ರಾಂ ಮತ್ತು ಎಂ.ಕೆ. ಶಂಕರ್ ಅವರ ಸಂಪಾದಕತ್ವದ ‘ಹಾಸಾಕೃ’ ಕೃತಿಯ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಾಸಾಕೃ ಒಡನಾಟದ ನಂತರವೂ ಅವರ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಲಿಲ್ಲ. ಆದರೆ ಇಂದು ಬಿಡುಗಡೆಯಾಗಿರುವ ಈ ಕೃತಿ ಗೆಳೆಯನ ಬಗೆಗೆ ಇನ್ನೂ ಹೆಚ್ಚು ತಿಳಿಯಲು ನೆರವಾಗಲಿದೆ. ಇಂತಹ ಕೃತಿಯನ್ನು ಸಂಪಾದಿಸಿದ ಮೋಹನ್ ರಾಂ ಮತ್ತು ಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ನಿರ್ದೇಶಕ ಟಿ.ಎನ್. ಸೀತಾರಾಂ ಮಾತನಾಡಿ, ಹಾಸ್ಯದ ಒಡಲಿನಲ್ಲಿ ಎಲ್ಲರನ್ನೂ ತೇಲಿಸುವ ಹಾಸಾಕೃ ಘಟಾನುಘಟಿಗಳೊಂದಿಗೆ ವೇದಿಕೆ ಹಂಚಿಕೊಂಡವರು. ಅವರಿಗೆ ವಯಸ್ಸಾದರೂ, ಮನಸ್ಸು ಇಂದಿಗೂ ಯುವಕನಂತೆ ಇದೆ. ಈ ಕೃತಿ ಸಂಪಾದಿಸಿರುವ ಮೋಹನ್ ರಾಂ ಮತ್ತು ಹಾಸಾಕೃ ಅವರನ್ನು ಒಂದುಗೂಡಿಸಿದ್ದೂ ಇದೇ ಹಾಸ್ಯಪ್ರಜ್ಞೆ ಎಂದು ಹೇಳಿದರು.
ಇದೇ ವೇಳೆ ಪತ್ರಕರ್ತ ಮುರಳೀಧರ ಖಜಾನೆ ಅವರ ‘ಕಾರ್ನಾಡ್ ಕೆಲಿಡೋಸ್ಕೋಪಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಸುಚಿತ್ರ ಫಿಲಂ ಸೊಸೈಟಿ ಅಧ್ಯಕ್ಷ ಎಚ್.ಎನ್. ನರಹರಿರಾವ್ ಮಾತನಾಡಿ, ಸಿನಿಮಾ ಕ್ಷೇತ್ರದ ಮೂಲಕ ನನಗೆ ಕಾರ್ನಾಡ್ ಅವರ ಒಡನಾಟ ಸಾಧ್ಯವಾಯಿತು. ಬಳಿಕ ‘ಕಾಡು’ ಚಿತ್ರದ ಮೂಲಕ ಅವರೊಂದಿಗಿನ ಒಡನಾಟ ಮತ್ತಷ್ಟು ಗಟ್ಟಿಯಾಯಿತು ಎಂದು ನೆನೆದರು.
ಕೃತಿಗಳ ಪರಿಚಯ: ಪತ್ರಕರ್ತ ಮುರಳೀಧರ ಖಜಾನೆ ಮಾತನಾಡಿ, ಕರ್ನಾಡರ ಚಿತ್ರಬದುಕಿನ ಕುರಿತು ಪುಸ್ತಕ ಬರೆಯಬೇಕೆಂಬ ಆಸೆ ಇತ್ತು. ಆದರೆ ಇದಕ್ಕೆ ಕಾರ್ನಾಡರು ಒಪ್ಪಿರಲಿಲ್ಲ. ಕೊನೆಗೆ ಅನುಮತಿ ಕೊಟ್ಟರು. ಅವರ ನಿಧಾನ ನಂತರ ಈ ಪುಸ್ತಕ ಕೈಗೆತ್ತಿಕೊಂಡೆ. ಅಷ್ಟರಲ್ಲಿ ಅವರಿಂದ ಹಲವು ಮಾಹಿತಿ ಕಲೆಹಾಕುವುದರ ಜತೆಗೆ ಅವರನ್ನು ಹತ್ತಿರದಿಂದ ಬಲ್ಲ ಟಿ.ಎಸ್. ನಾಗಾಭರಣ, ಕೆ.ಎಂ. ಚೈತನ್ಯ, ಸುಚೇಂದ್ರ ಪ್ರಸಾದ್, ಶಶಿಧರ ಅಡಪ ಮುಂತಾದವರಿಂದಲೂ ಕಾರ್ನಾಡರೊಂದಿಗಿನ ಅವರ ಅನುಭವನಗಳನ್ನು ಕಲೆಹಾಕಿ ಈ ಪುಸ್ತಕ ಸಿನಿಮಾ ಅಭ್ಯಾಸಿಸುವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಎನ್.ಕೆ. ಮೋಹನ್ ರಾಂ, ಎಂ.ಕೆ. ಶಂಕರ್, ಸಾಂಸ್ಕೃತಿಕ ಚಿಂತಕ ಎನ್.ವಿದ್ಯಾಶಂಕರ್, ಚಾರುಮತಿ ಪ್ರಕಾಶನದ ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.
ಕೋಟ್ ...
ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ವಿಪರೀತ ಬಡತನ. ಕಲಿಕೆಗೆ ಬಹಳಷ್ಟು ಕಷ್ಟವಿತ್ತು. ಆದರೂ ಮನೆಯಿಂದ ಕಲಿಕೆಗೆ ಉತ್ತಮ ಪ್ರೋತ್ಸಾಹ ದೊರೆಯಿತು. ಅದುವೇ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಗೆ ಕಾರಣವಾಯಿತು.
- ಹಿರಿಯ ಲೇಖಕ ಹಾಸಾಕೃ