ಕುಂಟುತ್ತ ಸಾಗಿರುವ ರೈಲ್ವೆ ಯೋಜನೆಗಳಿಗೆ ವೇಗ ಸಿಕ್ಕೀತೆ ?

New Rail New
Published on

ಹುಬ್ಬಳ್ಳಿ : ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ನೈಋತ್ಯ ರೈಲ್ವೆ ವಲಯದ ಪ್ರಗತಿ ಪರಿಶೀಲನೆಗಾಗಿ ಅ. 3ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಹಲವಾರು ರೈಲ್ವೆ ಯೋಜನೆಗಳ ಅನುಷ್ಠಾನದ ಬಗ್ಗೆ ಸಾರ್ವಜನಿಕರಲ್ಲಿ ಹೊಸ ಆಶಯ ಮೂಡಿದೆ.

ಧಾರವಾಡದಿಂದ ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ ಹೊಸ ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ

ಪೂರ್ಣಗೊಳಿಸುವುದರಿಂದ ಜನತೆಗೆ 2 ತಾಸು ಸಮಯ ಉಳಿತಾಯವಾಗಲಿದೆ. ಆದರೆ, ಈ ನೂತನ ಮಾರ್ಗಕ್ಕೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ವೇಗ ನೀಡಬೇಕೆಂಬುದು ಪ್ರಮುಖ ಬೇಡಿಕೆ. ಕೇಂದ್ರ ಸರ್ಕಾರವು ತನ್ನ ಪ್ರಭಾವ ಬಳಸಿಕೊಂಡು ಹಸಿರು ನ್ಯಾಯಮಂಡಳಿಯಿಂದ ಯೋಜನೆಗೆ ಅನುಮತಿ ನೀಡುವಂತೆ ನೋಡಿಕೊಳ್ಳಬೇಕು. ಈ ಮಾರ್ಗವು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ ಬಾಗಲಕೋಟೆ, ಹೊಸಪೇಟೆ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳ ಜನರಿಗೆ ಹಾಗೂ ಸರಕು ಸಾಗಾಣಿಕೆಗೆ ಅತ್ಯತ್ತಮ ಮಾರ್ಗವಾಗಿದೆ. ಇದರಿಂದ ಆರ್ಥಿಕ ಬೆಳವಣಿಗೆಗೂ ವೇಗ ಸಿಗಲಿದೆ.

ಹುಬ್ಬಳ್ಳಿಯ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆಗೆ ಹೊಸ ರೈಲು ಮಾರ್ಗದ ಸಂಪರ್ಕ ಒದಗಿಸಬೇಕೆಂಬ ಬೇಡಿಕೆಯೂ ಇಲ್ಲಿನ ವ್ಯಾಪಾರಸ್ಥರು ಹಾಗೂ ರೈತರದ್ದು. ಹಾವೇರಿಯಿಂದ-ಯಲವಗಿ-ಲಕ್ಷೆ್ಮೕಶ್ವರ -ಗದಗಕ್ಕೆ ಹೊಸ ರೈಲು ಮಾರ್ಗದ ಅಗತ್ಯವಿದೆ. ಈ ಮಾರ್ಗದ ರೈಲು ಯೋಜನೆ ಪ್ರಾರಂಭಿಸಬೇಕು ಎಂಬ ಒತ್ತಾಸೆ ಇಲ್ಲಿನ ಜನರದ್ದು. ಬ್ಯಾಡಗಿ ಮೆಣಸಿನಕಾಯಿ ಬೆಳೆ ಜಗತ್ ಪ್ರಸಿದ್ಧಿ ಹೊಂದಿರುವುದರಿಂದ ಹುಬ್ಬಳ್ಳಿ-ಬೆಂಗಳೂರು ಮಧ್ಯೆ

ಸಂಚರಿಸುವ ಎಕ್ಸಪ್ರೆಸ್ ರೈಲುಗಳಿಗೆ ಬ್ಯಾಡಗಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕೆಂಬ ಆಶಯವೂ ಜನಸಾಮಾನ್ಯರದ್ದು.

ಹುಬ್ಬಳ್ಳಿ -ಬೆಂಗಳೂರು ವಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಮಾಡಬೇಕು. ಈ ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 5.30ಕ್ಕೆ ಚಲಿಸಿ, ಬೆಂಗಳೂರನ್ನು 10.30ಕ್ಕೆ ತಲುಪುವುದರಿಂದ ವ್ಯಾಪಾರಸ್ಥರು, ಉದ್ಯಮಿಗಳು ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮರಳಿ ರಾತ್ರಿ ರೈಲು ಮುಖಾಂತರ ಹುಬ್ಬಳ್ಳಿಗೆ ವಾಪಸ್ಸಾಗಲು ಅನುಕೂಲವಾಗುತ್ತದೆ.

ತಾಳಗುಪ್ಪಾ-ಹುಬ್ಬಳ್ಳಿ (ಶಿರಸಿ ಮಾರ್ಗ) 158ಕಿ.ಮೀ. ಹೊಸ ರೈಲು ಮಾರ್ಗ ನಿರ್ವಣಕ್ಕೆ ಸ್ಥಳ ಸಮೀಕ್ಷೆ ಕಾರ್ಯ ಮುಗಿದಿದ್ದು, ಈಗಾಗಲೇ 3.95ಕೋ.ರೂ. ಅನುದಾನ ಮಂಜೂರಾಗಿದೆ. ಈ ಮಾರ್ಗಕ್ಕಿರುವ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಲು ಎಫ್​ಎಲ್​ಎಸ್ ನ್ನು ಮಂಜೂರು ಮಾಡುವಂತೆ ನೈಋತ್ಯ ರೈಲ್ವೆ ವಲಯದ ಉಲ್ಲೇಖದಡಿ ರೈಲ್ವೆ ಮಂಡಳಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ. ಕರ್ನಾಟಕದ ಮಲೆನಾಡು

ಪ್ರದೇಶಗಳಾದ ಸಿದ್ದಾಪುರ, ಶಿರಸಿ ಮತ್ತು ಮುಂಡಗೋಡ ಹಾಗೂ ಹಲವಾರು ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುವ ಈ ರೈಲು ಮಾರ್ಗದಿಂದ ಆ ಭಾಗದ ತೆಂಗು ಹಾಗೂ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ತುಮಕೂರು-ದಾವಣಗೆರೆ ಹೊಸ ರೈಲು ಮಾರ್ಗ ನಿರ್ವಣಕ್ಕೆ ಈಗಾಗಲೇ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದ್ದು, ರಾಜ್ಯ ಸರ್ಕಾರವು ತ್ವರಿತಗತಿಯಲ್ಲಿ ಭೂಸ್ವಾಧೀನಪಡಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿ, ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net