ಕುಲಸಚಿವರ ಅವಧಿಪೂರ್ವ ವರ್ಗಾವಣೆಯ ವಿವಾದ ರಾಯಚೂರು ವಿವಿಯಲ್ಲಿ ನಡೆದ ಅಕ್ರಮದ ಹಿಂದಿನ ಕೈಗಳ ರಕ್ಷಣೆಗೆ ಸರ್ಕಾರ ಮುಂದಾಯಿತೇ?

RAICHUR
RAICHUR
Published on

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ಅಕ್ರಮ ಬ್ಯಾಂಕ್ ಖಾತೆ ತೆರೆದು ಹಣದ ಅವ್ಯವಹಾರ ನಡೆಸಿದ ಪ್ರಕರಣದ ಅಂತರಿಕ ತನಿಖೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿ ಆಡಳಿತ ಮುಂದಾಗಿದೆ. ಇದರ ಬೆನ್ನಲ್ಲೇ ಕುಲಸಚಿವರಾಗಿದ್ದವರನ್ನು ಸರ್ಕಾರ ತರಾತುರಿಯಲ್ಲಿ ವರ್ಗಾಯಿಸಿತ್ತು. ವರ್ಗಾವಣೆ ವಿವಾದ ಕೆಎಟಿ ಅಂಗಳಕ್ಕೆ ತಲುಪಿ ಹೊಸದೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ರಾಯಚೂರು ವಿವಿಯಲ್ಲಿ 2022-23 ನೇ ಸಾಲಿನಲ್ಲಿ ಆಗಿನ ಕುಲಸಚಿವ ಅಕ್ರಮವಾಗಿ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿ ಹೆಸರಿನಲ್ಲಿ ಹಣಕಾಸು ಇಲಾಖೆ ಗಮನಕ್ಕಿಲ್ಲದಂತೆ ಖಾತೆ ತೆರೆದು ಹಣಕಾಸು ವಹಿವಾಟು ನಡೆಸಿದ್ದು ಈಗ ಹಳೆಯ ಸಂಗತಿ. ಅಂತೆಯೇ ಕುಲಪತಿ ತನಿಖೆಗೆ ತಂಡ ರಚಿಸಿದ್ದು, ಇದೀಗ ಕಳೆದ ವರ್ಷವಷ್ಟೇ ಕುಲಸಚಿವರಾಗಿ ಬಂದಿದ್ದವರನ್ನು ಸರ್ಕಾರ ವರ್ಗಾವಣೆ ಮಾಡಿ ವಿವಿಯಲ್ಲಿ ನಡೆದಿದ್ದ ಅಕ್ರಮಕ್ಕೂ ವರ್ಗಾವಣೆಗೂ ನಂಟಿರುವ ಗುಮಾನಿ ಎದ್ದೇಳುವಂತೆ ಮಾಡಿದೆ.

ಅವಧಿ ಪೂರ್ವ ವರ್ಗಾವಣೆ-

ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿಗೆ ಕಳೆದ 2024 ರ ಅಗಸ್ಟ್ 30 ರಂದು ಕುಲಸಚಿವರಾಗಿ ಡಾ.ಶಂಕರಪ್ಪ ವಣಿಕ್ಯಾಳ್ ಆಗಮಿಸಿ ಅಧಿಕಾರ ಸ್ವೀಕರಿಸಿದರು. ಅವರ ಅಧಿಕಾರ ಸ್ವೀಕಾರದ ನಂತರವೇ ವಿವಿಯಲ್ಲಿನ ಹಣಕಾಸು ವ್ಯವಹಾರಗಳ ಅಕ್ರಮ ಬಯಲಾಗಿದೆ ಎಂದು ಹೇಳಲಾಗುತ್ತಿದ್ದು, ಅಕ್ರಮದಲ್ಲಿ ಶಾಮೀಲಾದವರು ಡಾ.ಶಂಕರಪ್ಪ ವಣಿಕ್ಯಾಳ್ ವರ್ಗಾವಣೆಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆಂದು ಹೇಳಲಾಗುತ್ತಿದೆ. ಅಂತೆಯೇ ಸರ್ಕಾರವೂ ಅನುಮಾನಾಸ್ಪದ ರೀತಿಯಲ್ಲಿ ಕೇವಲ 09 ತಿಂಗಳಲ್ಲೇ ಕುಲಸಚಿವರಾಗಿದ್ದ ಡಾ.ಶಂಕರಪ್ಪ ವಣಿಕ್ಯಾಳ್ ಅವರನ್ನು ಯಾವುದೇ ಜಾಗೆ ತೋರಿಸದೇ ದಿಡೀರ್ ಎತ್ತಂಗಡಿ ಮಾಡಿ ಜೂ.18 ರಂದು ಆದೇಶ ಹೊರಡಿಸಿತ್ತು.

ಸರ್ಕಾರದ ಈ ಕ್ರಮವು ವಿವಿಯ ಆವರಣದಿಂದ ಕೇಳಿ ಬಂದಿದ್ದ ಅಕ್ರಮ ನಡೆದಿರುವ ಮಾತಿಗೆ ಇಂಬು ನೀಡುವಂತಾಗಿದ್ದು ಸಾರ್ವಜನಿಕರಲ್ಲಿ ಚರ್ಚೆಗೀಡು ಮಾಡಿತು.

ಕೆಎಟಿ ಗೆ ದೂರು ಈ ಮಧ್ಯೆ ಅವಧಿ ಪೂರ್ವ ವರ್ಗಾವಣೆಯಿಂದ ತೀವ್ರ ಬೇಸರಗೊಂಡ ಕುಲಸಚಿವ ಡಾ.ಶಂಕರಪ್ಪ ವಣಿಕ್ಯಾಳ್ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಗೆ ಮೊರೆ ಹೋಗಿದ್ದರು. ಕೆಎಟಿಯು ಆದೇಶ ಹೊರಡಿಸಿ ವರ್ಗಾವಣೆ ನಿಯಮ ಪಾಲಿಸದೇ ಅವಧಿಗೂ ಮುನ್ನವೇ ಯಾವುದೇ ಸೂಕ್ತ ಸ್ಥಳ ತೋರಿಸದೇ ಡಾ.ಶಂಕರಪ್ಪ ವಣಿಕ್ಯಾಳ್ ಅವರನ್ನು ವರ್ಗಾಯಿಸಿರುವುದು ಸರಿಯಲ್ಲ. ಅವರನ್ನು ರಾಯಚೂರು ವಿವಿ ಕುಲಸಚಿವ ಸ್ಥಾನದಿಂದ ಬಿಡುಗಡೆಗೊಳಿಸದಂತೆ ಜೂ.19 ರಂದು ನಿರ್ದೇಶನ ನೀಡಿತ್ತು. ಈ ಮಧ್ಯೆ ಡಾ.ಶಂಕರಪ್ಪ ವಣಿಕ್ಯಾಳ್ ಅವರನ್ನು ವರ್ಗಾಯಿಸಿದ್ದ ಸರ್ಕಾರವು ಆನಂತರದಲ್ಲಿ ಅವರ ಸ್ಥಾನಕ್ಕೆ ಡಾ.ಎ.ಚನ್ನಪ್ಪ ಅವರನ್ನು ರಾಯಚೂರು ವಿವಿ ಕುಲಸಚಿವರಾಗಿ ನೇಮಿಸಿದೆ.

ಪಾಲನೆಯಾಗದ ಆದೇಶ-

ಕೆಎಟಿ ಆದೇಶದ ಪ್ರಕಾರ ಡಾ.ಶಂಕರಪ್ಪ ವಣಿಕ್ಯಾಳ್ ಅವರನ್ನು ಕುಲಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತಿಲ್ಲ. ಆದರೆ ಈಗಾಗಲೇ ಸರ್ಕಾರದ ಸೂಚನೆಯಂತೆ ಸೇವೆಗೆ ಹಾಜರಾಗಿರುವ ಡಾ.ಎ.ಚನ್ನಪ್ಪ ಅವರನ್ನು ಸರ್ಕಾರ ಕೆಎಟಿ ಆದೇಶದ ಹಿನ್ನೆಲೆ ವಾಪಸು ಕರೆಯಿಸಿಕೊಂಡು ಡಾ.ಶಂಕರಪ್ಪ ವಣಿಕ್ಯಾಳ್ ಅವರಿಗೆ ಅವಕಾಶ ಮಾಡಿಕೊಡಲು ಮುಂದಾಗದಿರುವುದು ಅಕ್ರಮದಲ್ಲಿ ಶಾಮೀಲಾಗಿರುವ ಪ್ರಭಾವಿಗಳಿಗೆ ಸರ್ಕಾರ ಮಣೆ ಹಾಕಿದೆಯೇ ಎಂಬ ಸಂಶಯ ಮೂಡಲು ದಾರಿ ಮಾಡಿದೆ.

ವಿವಿಯಲ್ಲಿ ಅನುದಾನದ ಅನುಮಾನಾಸ್ಪದ ಬಳಕೆ ನಡೆದ ನಂತರದಲ್ಲಿ ಆ ಅಕ್ರಮದಲ್ಲಿ ಶಾಮೀಲಾದವರನ್ನು ಪಾರು ಮಾಡುವುದು ಹಾಗೂ ಇನ್ನಷ್ಟು ಅಕ್ರಮ ಬಯಲಾಗುವ ಭೀತಿಯಿಂದ ವಿವಿಯ ಕುಲಸಚಿವ ರಾಗಿದ್ದವರ ಬದಲಿಸಲು ಸರ್ಕಾರ ಮುಂದಾಯಿತೇ ಎಂಬ ಗುಮಾನಿ ಕುಲಸಚಿವರ ಹುದ್ದೆಯ ಸಂಘರ್ಷ ಹೆಚ್ಚಾಗುವಂತೆ ಮಾಡಿದೆ.

ಅವಧಿಗೂ ಪೂರ್ವದಲ್ಲಿಯೇ ವರ್ಗಾವಣೆ ಆಗಿತ್ತು. ಅದನ್ನು ಪ್ರಶ್ನಿಸಿ ಕೆಎಟಿಗೆ ಮೊರೆ ಹೋಗಿದ್ದೆ. ಕೆಎಟಿ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿ ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡದಂತೆ ನಿರ್ದೇಶನ ನೀಡಿದೆ. ಆದರೆ ವಿವಿಯಲ್ಲಿ ಕೆಎಟಿ ತೀರ್ಪು ಜಾರಿಯಾಗಲು ಅವಕಾಶ ನೀಡಿಲ್ಲ. ಹೀಗಾಗಿ ಮತ್ತೆ ಕೆಎಟಿ ಮೊರೆ ಹೋಗಿದ್ದೇನೆ.

ಡಾ.ಶಂಕರಪ್ಪ ವಣಿಕ್ಯಾಳ್, ವರ್ಗಾವಣೆಗೊಂಡಿರುವ ಕುಲಸಚಿವ ರಾಯಚೂರು ವಿವಿ.

ಅವಧಿಗೂ ಪೂರ್ವದಲ್ಲಿ ಡಾ.ಶಂಕರಪ್ಪ ವಣಿಕ್ಯಾಳ್ ಅವರು ಕೆಎಟಿಗೆ ಹೋಗಿರುವುದು ನನಗೆ ಮಾಹಿತಿ ಇಲ್ಲ. ಒಂದು ವೇಳೆ ಕೆಎಟಿ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿ ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡದಂತೆ ನಿರ್ದೇಶನ ನೀಡಿದ್ದರೆ ಕುಲಪತಿಗೆ ಪತ್ರ ಬರೆಯಲಿ ನನ್ನದೆ ಯಾವುದೇ ಅಡ್ಡಿ ಇಲ್ಲ.ನಾನು ಕೋರ್ಟ್ ಆದೇಶವನ್ನು ಪಾಲಿಸುವೆ.

ಡಾ.ಎ.ಚನ್ನಪ್ಪ ಕುಲಸಚಿವ ರಾಯಚೂರು ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net