

ಬೆಂಗಳೂರು ಗ್ರಾಮಾಂತರ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುವುದೇ..? ಇಂಥದ್ದೊಂದು ಆತಂಕ ಹಾಗೂ ಬೇಸರಕ್ಕೆ ಕಾರಣವಾಗಿದೆ ಜಿಟಿಜಿಟಿ ಮಳೆ.
ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆದಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಮೂರ‌್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಿಂದ ಬಂಪರ್ ರಾಗಿ ಸಲು ಎದುರು ನೋಡುತ್ತಿರುವ ರೈತರಿಗೆ ಗಾಳಿ ಮಳೆ ಆತಂಕ ಮೂಡಿಸುತ್ತಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ 41,036 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ರಾಗಿ ಕಟಾವು ಆರಂಭವಾಗಿದೆ, ಕೃಷಿಯಂತ್ರಧಾರೆಯಡಿ ರಾಗಿ ಒಕ್ಕಣೆ ಯಂತ್ರಗಳು ಜಮೀನುಗಳತ್ತ ಆಗಮಿಸುತ್ತಿವೆ. ಇಂಥ ವೇಳೆ ಗಾಳಿಸಹಿತ ಮಳೆ ಬೀಳುತ್ತಿರುವುದು ರೈತಾಪಿ ವರ್ಗದಲ್ಲಿ ದುಗುಡ ಹೆಚ್ಚಿಸಿದೆ.
ಹರ್ಷದ ಜತೆಗೆ ಚಿಂತೆ: ಈ ಬಾರಿ ಉತ್ತಮ ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಹರ್ಷದ ಹೊನಲು ಹರಿದಿತ್ತು. ಆದರೆ ಇದೇ ಮಳೆ ಕೊಯ್ಲು ಸಮಯದಲ್ಲೂ ಮುಂದುವರಿದಿರುವುದು ಚಿಂತೆಗೆ ಕಾರಣವಾಗಿದೆ. ರೈತರಿಗೆ ಕೈಗೆ ಬಂದ ಫಸಲು ಮಳೆಯಿಂದ ಹಾಳಾಗುವ ಭೀತಿ ಎದುರಾಗಿದೆ.
ಭೂತಾಯಿ ನಂಬಿದ್ದೇವೆ: ಪ್ರಸಕ್ತ ಸಾಲಿನ ಆರಂಭದಲ್ಲೇ ಕರೊನಾ ಮಹಾಮಾರಿ ಆರ್ಭಟದಿಂದ ಲಾಕ್‌ಡೌನ್ ೋಷಣೆಯಾಗಿ ಉದ್ಯೋಗ ಕಳೆದುಕೊಂಡ ಸಾವಿರಾರು ರೈತಾಪಿ ಯುವಕರು ಸ್ವಗ್ರಾಮಗಳತ್ತ ಮುಖಮಾಡಿದ್ದರು. ಅದರಲ್ಲಿ ಕೆಲವರು ಮತ್ತೆ ಪಟ್ಟಣ ಪ್ರದೇಶಗಳತ್ತ ಮುಖಮಾಡಿದರೆ ಬಹುತೇಕರು ಕೃಷಿ ಚಟುವಟಿಕೆಗಳಲ್ಲಿ ಜೀವನ ರೂಪಿಸಿಕೊಳ್ಳಲು ಮುಂದಾದರು. ಇದೇ ವೇಳೆ ಮಳೆರಾಯ ಕೈ ಹಿಡಿದಿದ್ದರಿಂದ ಅದೆಷ್ಟೊ ವರ್ಷಗಳಿಂದ ಕೃಷಿ ಚಟುವಟಿಕೆಗಳಿಂದ ದೂರವಾಗಿದ್ದ ಭೂಮಿಗಳಿಗೆ ಜೀವ ಕಳೆ ಬಂದಿತ್ತು. ಗ್ರಾಮಾಂತರ ಜಿಲ್ಲೆಯಲ್ಲಿ ಬಹುತೇಕ ತಕ್ಕಲು ಬಿದ್ದಿದ್ದ ಭೂಮಿಗಳಲ್ಲಿ ರಾಗಿ ತೊನೆಯತೊಡಗಿದೆ. ನಿರುದ್ಯೋಗಿಗಳ ಕೈಹಿಡಿದಿದ್ದ ಭೂಮಿತಾಯಿ ರಾಗಿ ಕೊಯ್ಲು ಸಮಯದಲ್ಲಿ ಮಳೆಯಾಗುತ್ತಿರುವುದರಿಂದ ಮತ್ತೆ ಕೈಬಿಡುವಳೆ ಎಂಬ ಆತಂಕ ಎದುರಾಗಿದೆ. ಭೂಮಿ ತಾಯಿಯನ್ನು ನಂಬಿದ್ದೇವೆ ಏನಾಗುವುದೋ ಗೊತ್ತಿಲ್ಲ ಎಂದು ಅನೇಕ ರೈತಾಪಿ ಯುವಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
41 ಸಾವಿರ ಹೆಕ್ಟೇರ್ ರಾಗಿ: ಜಿಲ್ಲೆಯ ನಾಲ್ಕೂ ತಾಲೂಕುಗಳ ಬಹುತೇಕ ಜಮೀನಿನಲ್ಲಿ ಈ ವರ್ಷ ರಾಗಿ ಬೆಳೆಯಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 10,286 ಹೆಕ್ಟೇರ್, ನೆಲಮಂಗಲ 11,742, ದೇವನಹಳ್ಳಿ 10,484 ಮತ್ತು ಹೊಸಕೋಟೆ 8,524 ಹೆಕ್ಟೇರ್ ಸೇರಿ ಜಿಲ್ಲೆಯ 41,036 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.
ಕೃಷಿ ಜೀವನದ ಕನಸಿಗೆ ತಣ್ಣೀರು!: ಒಂದು ಎಕರೆಯಲ್ಲಿ ರಾಗಿ ಬೆಳೆಯಲು 25 ರಿಂದ 30 ಸಾವಿರ ರೂಪಾಯಿ ಖರ್ಚು ಬರುತ್ತದೆ. 1 ಎಕರೆಗೆ 15ರಿಂದ 20 ಕ್ವಿಂಟಾಲ್ ರಾಗಿ ಫಸಲು ಬರುವ ನಿರೀಕ್ಷೆ ಇರುತ್ತದೆ. ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ಗೆ 3 ಸಾವಿರ ರೂ. ಬೆಲೆ ಇದೆ. ಸರ್ಕಾರ ಬೆಂಬಲ ಬೆಲೆ ೋಷಿಸಿರುವುದರಿಂದ ರೈತರಿಗೆ ತುಸು ನೆಮ್ಮದಿ ಎನಿಸಿದರೂ ಈಗ ಸುರಿಯುತ್ತಿರುವ ಮಳೆಯಿಂದ ರಾಗಿ ಫಸಲು ಕೈಕೊಡಲಿದೆ ಎಂಬ ಆತಂಕ ಎದುರಾಗಿದೆ. ಹಾಕಿದ ಬಂಡವಾಳ ಮರಳಿ ಬರುವುದೇ ಎನ್ನುವ ಚಿಂತೆ ಒಂದೆಡೆಯಾದರೆ ಕೃಷಿಯೊಂದಿಗೆ ಜೀವನ ಆರಂಭಿಸಬೇಕೆಂಬ ರೈತಾಪಿ ಯುವಕರ ಛಲಕ್ಕೂ ಪೆಟ್ಟು ಬೀಳಲಿದೆಯೇ ಎಂಬ ದುಗುಡಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಮಳೆಗಾಳಿಗೆ ನೆಲಕಚ್ಚಿರುವ ರಾಗಿ ಸಲು ಕೊಯ್ಲಿಗೆ ದುಬಾರಿ ಕೂಲಿ ತೆರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ನೆಲ ಕಚ್ಚಿರುವ ಹೊಲ ಕೊಯ್ಲು ಮಾಡಲು ಕಷ್ಟ ಇರುವುದರಿಂದ ಹೆಚ್ಚಿನ ಕೂಲಿ ಕೇಳುತ್ತಾರೆ. ಮಳೆ ಹೀಗೆಯೇ ಮುಂದುವರಿದರೆ ರಾಗಿ ಫಸಲು ಹೊಲದಲ್ಲಿಯೇ ಮೊಳಕೆಯೊಡೆಯುತ್ತದೆ. ಅದು ಕಪ್ಪು ಬಣ್ಣಕ್ಕೆ ತಿರುಗಿದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದಂತಾಗುತ್ತದೆ. ಚನ್ನರಾಯಪ್ಪ, ಬ್ಯಾಡರಹಳ್ಳಿ ರೈತ