

ವಿಜಯವಾಣಿ ವಿಶೇಷ ಸಿಂಧನೂರು
ತಾಲೂಕಿನಲ್ಲಿ ಭತ್ತ ಕಟಾವು ಆರಂಭ ಬೆನ್ನಲ್ಲೇ ಈಗ ಎಪಿಎಂಸಿ ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಮಾರುಕಟ್ಟೆಗೆ ಬರುವ ವೇಳೆಗೆ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ತಾಲೂಕಿನಲ್ಲಿ ನಾಟಿಯಾಗಿದ್ದ 66 ಸಾವಿರ ಹೆಕ್ಟೇರ್ ಪ್ರದೇಶದ ಭತ್ತದಲ್ಲಿ ಈಗಾಗಲೇ ಶೇ.20 ಕಟಾವಿಗೆ ಬಂದಿದೆ. ಹೊಸ ಭತ್ತದ ಮಾರಾಟ ಪ್ರಕ್ರಿಯೆ ಶುರುವಾಗುತ್ತಿದೆ. ತುಂಗಭದ್ರಾ ನದಿ ದಂಡೆ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆದ ಭತ್ತ ಸಿಂಧನೂರು, ಗಂಗಾವತಿ, ಕಾರಟಗಿ ಹಾಗೂ ಸಿರಗುಪ್ಪ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದೆ. ಈ ಮೊದಲು ಆರ್‌ಎನ್‌ಆರ್ ತಳಿ ಭತ್ತ 75 ಕೆಜಿಗೆ ಎರಡು ಸಾವಿರ ರೂ. ಇದ್ದು, ಕಾವೇರಿ ಸೋನಾ 1700 ರೂ. ಇತ್ತು. ಈಗ ಏಕಾಏಕಿ ಭತ್ತ ಮಾರುಕಟ್ಟೆಗೆ ಬರುತ್ತಿದ್ದಂತೆ 200-300 ರೂ. ದರ ಕುಸಿತಗೊಂಡಿದ್ದು, ಆತಂಕ ತಂದೊಡ್ಡಿದೆ. ಸಂಪೂರ್ಣ ಪ್ರಮಾಣದ ಭತ್ತ ಮಾರುಕಟ್ಟೆಗೆ ಬಂದ ಸಂದರ್ಭ ಇನ್ನಷ್ಟು ಬೆಲೆ ಕುಸಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಅವಳಿ ಜಿಲ್ಲೆಗಳಲ್ಲಿ ಈ ಬಾರಿ ಅತೀ ಹೆಚ್ಚು ಪ್ರಮಾಣದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಉತ್ತಮ ಮಳೆಯಿಂದ ಫಸಲೂ ಹೆಚ್ಚಿದೆ.
ಕಳೆದ ಸಲ ಭಾರಿ ಲಾಭಾಂಶ
ಕಳೆದ ಬಾರಿ ಮಳೆ ಕೊರತೆ ಒಂದೆಡೆಯಾದರೆ, ಹಿಂಗಾರಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಿರಲಿಲ್ಲ. ಇದರಿಂದ ರೈತರಿಗೆ ಬೇಸಿಗೆ ಬೆಳೆ ಬೆಳೆ ಇರಲಿಲ್ಲ. ಮುಂಗಾರಿನಲ್ಲಿ ಬೆಳೆದ ಭತ್ತಕ್ಕೆ ಹಿಂದೆಂದೂ ಕಾಣದ ಬೆಲೆ ಮಾರುಕಟ್ಟೆಯಲ್ಲಿತ್ತು. ಆರ್‌ಎನ್‌ಆರ್ ತಳಿಯ ಭತ್ತ ಗರಿಷ್ಠ 2600 ರೂ. (75 ಕೆಜಿ) ದರವಿತ್ತು. ಎಲ್ಲ ರೈತರು ಆರ್‌ಎನ್‌ಆರ್ ಹಾಗೂ ಕಾವೇರಿ ಸೋನಾ ಬೆಳೆಯಲ್ಲಿ ಭಾರಿ ಲಾಭಾಂಶ ಪಡೆದಿದ್ದರು. ಒಂದೇ ಬೆಳೆಯಲ್ಲಿ ಎರಡು ಬೆಳೆಯ ಲಾಭಗಳಿಸಲಾಗಿತ್ತು. ಮೊಟ್ಟ ಮೊದಲ ಬಾರಿಗೆ ರೈತರಿಗೆ ಭಾರಿ ಲಾಭವಾಗಿತ್ತು.
ಹಿಂದಿನ ಬಾರಿ ವ್ಯಾಪಾರಿಗಳಿಗೆ ಭಾರಿ ನಷ್ಟ
ಕಳೆದ ವರ್ಷ ಮುಂಗಾರಿನಲ್ಲಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆ ಇದ್ದುದ್ದರಿಂದ ರೈತರು ನೇರವಾಗಿ ಮಾರುಕಟ್ಟೆಯಲ್ಲಿ ಭತ್ತ ಮಾರಿದ್ದರು. ವ್ಯಾಪಾರಿಗಳು ಕೂಡಾ ಮುಂದೆ ಬೆಲೆ ಬರಬಹುದೆಂಬ ನಿರೀಕ್ಷೆಯೊಂದಿಗೆ ರೈತರಿಂದ ಆರ್‌ಎನ್‌ಆರ್ ಭತ್ತವನ್ನು 75 ಕೆಜಿ ಭತ್ತಕ್ಕೆ 2500 ರೂ.ನಂತೆ ಖರೀದಿ ಮಾಡಿದ್ದರು. ಕಾವೇರಿ ಸೋನಾ ಭತ್ತವನ್ನು ಕೂಡಾ 2200 ರೂ.ಗೆ (75ಕೆಜಿ) ಖರೀದಿಸಿದ್ದರು. ಆದರೆ, ನಾಲ್ಕೈದು ತಿಂಗಳ ಕಾಲ ಕಾದ ವ್ಯಾಪಾರಿಗಳಿಗೆ ಮಾರುಕಟ್ಟೆ ಭಾರಿ ಶಾಕ್ ನೀಡಿದ್ದು, ಹಳೆಯ ಭತ್ತ ಖರೀದಿಗಿಂತ 200-300 ರೂ. ಇಳಿಕೆಯಾಗಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದರು. ಇದೇ ಮೊದಲ ಬಾರಿಗೆ ವ್ಯಾಪಾರಿಗಳು ಹೆಚ್ಚಿನ ನಷ್ಟ ಅನುಭವಿಸಿದ್ದರು. ಸಣ್ಣ ವ್ಯಾಪಾರಿ 20 ಲಕ್ಷ ರೂ. ನಷ್ಟ ಹೊಂದಿದ್ದರೆ, ದೊಡ್ಡ ದೊಡ್ಡ ವ್ಯಾಪಾರಿಗಳು ಕೋಟಿ ರೂ.ಯಷ್ಟು ನಷ್ಟ ಅನುಭವಿಸಿದ್ದಾರೆ.
ಸಿಎಂಗೆ ಎಂಎಲ್‌ಸಿ ಮನವಿ ಸಿಂಧನೂರು ತಾಲೂಕಿನಲ್ಲಿ ಈಗಾಗಲೇ ಭತ್ತ ಕಟಾವು ಆರಂಭಗೊಂಡಿದ್ದು, ವಾರದಲ್ಲಿಯೇ ಭತ್ತ ಮಾರುಕಟ್ಟೆಗೆ ಬರಲಿದೆ. ಆದರೆ, ಈಗಿನಿಂದಲೇ ಬೆಲೆ ಕುಸಿತ ಶುರುವಾಗಿದೆ. ಕೂಡಲೇ ಭತ್ತದ ಖರೀದಿ ಕೇಂದ್ರ ತೆರೆದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೊಳಿಸುವ ಕ್ರಮಕ್ಕೆ ಮುಂದಾಗಬೇಕೆಂದು ಎಂಎಲ್‌ಸಿ ಬಸನಗೌಡ ಬಾದರ್ಲಿ ಅವರು ಸಿಎಂಗೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಮಾರುಕಟ್ಟೆಗೆ ಭತ್ತ ಬರುವ ಸಂದರ್ಭದಲ್ಲಿಯೇ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆಯಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೆ ಅನುಕೂಲವಾಗಲಿದೆ.
ಈಗಾಗಲೇ ರೈತರು ಭತ್ತ ಕಟಾವು ಆರಂಭಿಸಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ. ಕಳೆದ ವರ್ಷ ಭತ್ತಕ್ಕೆ ಉತ್ತಮ ಬೆಲೆ ಪಡೆದಿದ್ದೆವು. ಈ ವರ್ಷ ಆ ಬೆಲೆ ಸಿಗುವುದಿಲ್ಲ. ಭತ್ತದ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು. ಶರಣಪ್ಪ ಅಯೋಧಿ ರೈತ, ವೆಂಕಟೇಶ್ವರಕ್ಯಾಂಪ್.