

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಳೆ ನೀರು ಕೊಯ್ಲು ಪದ್ಧತಿ ಮೂಲಕ ಅಂತರ್ಜಲವೃದ್ಧಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಕೃಷಿ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರ. ಹಾಡೋನಹಳ್ಳಿ ಆವರಣದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಬಯಲುಸೀಮೆಯಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲ ಗಳಿಲ್ಲದಿರುವುದರಿಂದ ಅಂತರ್ಜಲ ಮಟ್ಟ ಪಾತಾಳ ಸೇರಿದೆ, 1600 ಅಡಿ ಆಳ ಹೋದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗದಿರುವಂಥ ಪರಿಸ್ಥಿತಿ ಎದುರಾಗಿದೆ, ಆದ್ದರಿಂದ ಮಳೆ ನೀರನ್ನು ಕೃಷಿ ಹೊಂಡದ ಮೂಲಕ ಹಾಗೂ ವಿವಿಧ ಕ್ರಮಗಳ ಮೂಲಕ ರಕ್ಷಣೆ ಮಾಡಬೇಕಿದೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಮುಂಜಾಗ್ರತೆ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಪ್ರತಿ ವರ್ಷ ಮಳೆಯಲ್ಲಿ ಏರುಪೇರಾಗುತ್ತಿರುತ್ತದೆ, ಅತೀವೃಷ್ಟಿ ಅನಾವೃಷ್ಟಿ ಸಾಮಾನ್ಯವಾಗಿದೆ ಹಲವು ಬಾರಿ ಅನಾವೃಷ್ಟಿಯೆ ಹೆಚ್ಚಿರುತ್ತದೆ ಕೆಲವು ಸಂದರ್ಭಗಳಲ್ಲಿ ಕುಡಿವ ನೀರಿಗೂ ಪರದಾಡುವಂಥ ಪರಿಸ್ಥಿತಿ ಎದುರಾಗುತ್ತದೆ ಆದ್ದರಿಂದ ನೀರಿನ ಮಿತ ಬಳಕೆ ಅವಶ್ಯಕವಾಗಿದೆ ಎಂದರು. ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ವಿಧಾನಗಳನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕಿದೆ ಈ ಬಗ್ಗೆ ಕೃಷಿ ಇಲಾಖೆ ಸಾಕಷ್ಟು ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದು ಇವುಗಳ ಬಗ್ಗೆ ಮಾಹಿತಿ ಪಡೆದು ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿಹೊಂಡಗಳಿಗೆ ಒತ್ತು ನೀಡಿ: ಸರ್ಕಾರ ಕೃಷಿಭಾಗ್ಯ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಕೃಷಿಹೊಂಡ ನಿರ್ಮಾಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ, ಸಬ್ಸಿಡಿ ದರದಲ್ಲಿ ಈ ಯೋಜನೆ ಜಾರಿಯಾಗಿದ್ದು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಟಾನಗೊಂಡಿದೆ ಎಂದು ಗಾಯತ್ರಿ ತಿಳಿಸಿದರು. ಕೃಷಿಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳುವುದರಿಂದ ನೀರಿನ ಸಂರಕ್ಷಣೆ ಹಾಗೂ ಮಿತಬಳಕೆ ಸಾಧ್ಯವಾಗುತ್ತದೆ, ಇದು ಮಳೆ ನೀರು ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಆಸಕ್ತ ರೈತರು ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನೀರಿನ ಅಭಾವ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಅಭಾವ ಕಾಡುತ್ತಿದೆ ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ದೊಡ್ಡಬಳ್ಳಾಪುರದ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ತಿಳಿಸಿದರು. ಪ್ರಸ್ತುತ ಲಭ್ಯವಿರುವ ನೀರಿನಲ್ಲಿ ಶೇ. 70 ರಷ್ಟು ಕೃಷಿಗೆ ಬಳಕೆ ಮಾಡಲಾಗುತ್ತಿದೆ ಹಾಗಾಗಿ ಮಳೆ ನೀರನ್ನು ಚೆನ್ನಾಗಿ ಶೇಖರಣೆ ಮಾಡಿ ಕೃಷಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು. ಈ ನಿಟ್ಟಿನಲ್ಲಿ ನೂತನ ತಂತ್ರಜ್ಞಾನವಾದ ಸ್ವಯಂಚಾಲಿತ (ಸೆನ್ಸಾರ್) ನೀರಾವರಿ ಯೋಜನೆ ಅನುಷ್ಟಾನಗೊಂಡಿದ್ದು ಇದರ ಮೂಲಕ ಭೂಮಿಗೆ ಎಷ್ಟು ನೀರು ಬೇಕೋ ಅಷ್ಟು ನೀರು ಕೊಟ್ಟು ನೀರಿನ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು. ಸ್ವಯಂಚಾಲಿತ ನೀರಾವರಿ ಯೋಜನೆ ರೈತರಿಗೆ ವರದಾನವಾಗಿದೆ ಈ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದು ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಬೆಳೆಗಳಿಗೆ ಈ ಹೊಸ ತಂತ್ರಜ್ಞಾನ ಬಹಳ ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದರು.