

ಮದ್ದೂರು : ಮಕರ ಸಂಕ್ರಾಂತಿ ಅಂಗವಾಗಿ ಸೋಮವಾರ ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತು.
ಪಟ್ಟಣದ ಶ್ರೀ ಹೊಳೆ ಆಂಜನೇಯಸ್ವಾಮಿ, ಶ್ರೀ ಉಗ್ರ ನರಸಿಂಹಸ್ವಾಮಿ, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ, ಕೋಟೆ ಮಾರಮ್ಮ, ಪೇಟೆ ಬೀದಿಯಲ್ಲಿರುವ ಆಂಜನೇಯಸ್ವಾಮಿ, ಶ್ರೀ ಮದ್ದೂರಮ್ಮ, ರಾಘವೇಂದ್ರಸ್ವಾಮಿ ಮಠ ಹಾಗೂ ಚಿಕ್ಕ ಅಂಕನಹಳ್ಳಿಯ ಶ್ರೀ ನಂದಿ ಬಸವೇಶ್ವರ, ವೈದ್ಯನಾಥಪುರದ ಶ್ರೀ ವೈದ್ಯನಾಥೇಶ್ವರ, ಕದಲಿಪುರ ಗ್ರಾಮದ ಕದಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಆಬಲವಾಡಿಯ ತೋಪಿನ ತಿಮ್ಮಪ್ಪ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ಜರುಗಿತು. ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ದೇಗುಲಗಳಿಗೆ ಆಗಮಿಸಿ ವಿಶೇಷ ಪೂಜೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದದರು.
ಸ್ವರ್ಗದ ಬಾಗಿಲು: ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ದೇಗುಲದಲ್ಲಿ ಸಂಜೆ ಸ್ವರ್ಗದ ಬಾಗಿಲು ಮೂಲಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಬಳಿಕ ಉತ್ಸವಾದಿಗಳು ಜರುಗಿದವು.
ಗಮನ ಸೆಳೆದ ಮಕ್ಕಳು: ಸಂಕ್ರಾಂತಿ ಹಬ್ಬದ ಅಂಗವಾಗಿ ಮಕ್ಕಳು ಮತ್ತು ಮಹಿಳೆಯರು ಹೊಸಬಟ್ಟೆ ಧರಿಸಿ, ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು.
ಕಿಚ್ಚು ಹಾಯಿಸಿದ ರೈತರು:ಸಂಕ್ರಾಂತಿ ಅಂಗವಾಗಿ ಪಟ್ಟಣದ ಕೆಮ್ಮಣ್ಣು ನಾಲೆಯ ಚನ್ನಸಂದ್ರಕ್ಕೆ ಹೋಗುವ ರಸ್ತೆಯಲ್ಲಿ ಜಾನುವಾರುಗಳಿಗೆ ವಿಶೇಷ ಪೂಜೆ ಮಾಡಿ ಕಿಚ್ಚು ಹಾಯಿಸಲಾಯಿತು. ಬಿಡುಗಂಡಿ, ಕೆಮ್ಮಣ್ಣುನಾಲೆ ಸರ್ಕಲ್, ಮದ್ದೂರಮ್ಮ ದೇವಸ್ಥಾನ ಆವರಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜಾನುವಾರುಗಳನ್ನು ಕಿಚ್ಚು ಹಾಯಿಸುವ ಮೂಲಕ ರೈತರು ಹಬ್ಬವನ್ನು ಸಂಭ್ರಮಿಸಿದರು.