ಬೈರಸಂದ್ರ ವಾರ್ಡ್ ಕಚೇರಿಯಲ್ಲಿ ಸುಗ್ಗಿಹಬ್ಬ ಸಂಕ್ರಾಂತಿ ಸಂಭ್ರಮ

byrasandra jan 15 2020
Published on

ಬೆಂಗಳೂರು: ವಿವಿಧ ಬಣ್ಣಗಳಿಂದ ಚಿತ್ತಾರಗೊಂಡ ರಂಗೋಲಿಗಳು, ಮದುವಣಗಿತ್ತಿಯಂತೆ ಅಲಂಕಾರಗೊಂಡ ಗೋವುಗಳ ದಂಡು, ಸಾಲುಸಾಲು ಕಬ್ಬಿನ ಜಲ್ಲೆ, ಹಸಿರು ತೋರಣ... ಇವೆಲ್ಲ ಕಂಡುಬಂದಿದ್ದು ಬೈರಸಂದ್ರ ವಾರ್ಡ್​ನ ಕಚೇರಿ ಆವರಣದಲ್ಲಿ. ಪಾಲಿಕೆ ಸದಸ್ಯ ನಾಗರಾಜು ನೇತೃತ್ವದಲ್ಲಿ ಮಂಗಳವಾರ ‘ಸಂಕ್ರಾಂತಿ ಸಡಗರ ಬನ್ನಿ ಆಚರಿಸೋಣ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆ ಎಲ್ಲರ ಗಮನ ಸೆಳೆಯಿತು. ಸ್ಥಳೀಯರು ಪಾಲ್ಗೊಂಡು ಸಂಭ್ರಮಿಸಿದರು.

ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ನಾಗರಾಜು ಗೋವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾರ್ಡ್​ನಲ್ಲಿ ಕೆಲಸ ಮಾಡುವ ಪೌರಕಾರ್ವಿುಕರಿಗೆ ಸೀರೆ, ಎಳ್ಳು-ಬೆಲ್ಲ, ಕಬ್ಬು ವಿತರಿಸಲಾಯಿತು.

ಸೌಮ್ಯಾ ರೆಡ್ಡಿ ಮಾತನಾಡಿ, ವರ್ಷದ ಮೊದಲ ಹಬ್ಬ ಇದಾಗಿದ್ದು, ನಾಡಿನ ಸಂಸ್ಕೃತಿಯ ಸಂಕೇತವಾಗಿದೆ. ನಗರದಲ್ಲಿ ಇಂತಹ ಹಬ್ಬಗಳನ್ನು ಆಚರಿಸುವುದರಿಂದ ಮಹಾನಗರ ನಿವಾಸಿಗಳಿಗೆ ಗ್ರಾಮೀಣ ಸೊಗಡಿನ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.

ಸಂಕ್ರಾತಿ ಹಬ್ಬ ನಮ್ಮ ಹಿಂದಿನವರ ಕೊಡುಗೆ. ಹಬ್ಬ ಹರಿದಿನಗಳ ಆಚರಣೆ ಮೂಲಕ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ಮಾತಿದೆ. ಪರಿಸರ ಸ್ವಚ್ಛವಾಗಿಡುವ ಪೌರಕಾರ್ವಿುಕರಿಗೆ ಎಳ್ಳು, ಬೆಲ್ಲ, ಕಬ್ಬಿನ ಜತೆಗೆ ಉಡುಗೊರೆ ನೀಡಿ ಹಬ್ಬ ಆಚರಿಸಲಾಗುತ್ತಿದೆ ಎಂದು ನಾಗರಾಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net