ಕೊಯ್ಲಿಗೆ 2500 ರೂ. ಬಾಡಿಗೆ ನಿಗದಿಪಡಿಸಿ

25 KAMPLI 02
ಕಂಪ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರೈತರು-ಹಾರ್ವೇಸ್ಟರ್ ಮಾಲೀಕರ ಸಭೆಯಲ್ಲಿ ತಹಸೀಲ್ದಾರ್ ಎಸ್.ಶಿವರಾಜ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ರೈತರಾದ ಬಿ.ವಿ.ಗೌಡ, ಆನಂದರೆಡ್ಡಿ, ಹರ್ವೇಸ್ಟರ್ ರಾಜಶೇಖರರೆಡ್ಡಿ ಇತರರಿದ್ದರು.
Published on

ಕಂಪ್ಲಿ: ಭತ್ತ ಕೊಯ್ಲು ಯಂತ್ರ ಬಾಡಿಗೆ ದರ ನಿಗದಿಗಾಗಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ತಹಸೀಲ್ದಾರ್ ಎಸ್.ಶಿವರಾಜ ನೇತೃತ್ವದಲ್ಲಿ ರೈತರು ಮತ್ತು ಹಾರ್ವೇಸ್ಟರ್(ಭತ್ತ ಕೊಯ್ಲು ಯಂತ್ರ)ಮಾಲೀಕರ ಸಭೆ ನಡೆಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಭತ್ತ ಬೆಳೆದ ರೈತರು ಮಳೆಯಿಂದ ನೆಲಕ್ಕೊರಗಿದ ಬೆಳೆಯನ್ನು ಎತ್ತಿ ಸೂಡು ಕಟ್ಟಲು ಹಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗಿದೆ. ಇಂತಹ ಸಂದರ್ಭದಲ್ಲಿ ಕೊಯ್ಲು ಯಂತ್ರ ಬಾಡಿಗೆಯನ್ನು 2300 ರೂ.ಗಳಿಂದ 3 ಸಾವಿರ ರೂ.ಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹಾರ್ವೇಸ್ಟರ್‌ದಾರರು ಗಂಟೆಗೆ 2500 ರೂ. ಬಾಡಿಗೆ ಪಡೆದು ಕೊಯ್ಲು ಮಾಡಬೇಕೆಂದು ಮನವಿ ಮಾಡಿದರು.

ಕೊಯ್ಲು ಯಂತ್ರ ಮಾಲೀಕರಾದ ರಾಜಶೇಖರರೆಡ್ಡಿ, ನರಸಿಂಹಲು, ಕೆ.ಭಾಸ್ಕರ, ವಾಸು, ವಿನಯ ಮಾತನಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಯಂತ್ರ ತಂದಿದ್ದು ಗಿಟ್ಟುತ್ತಿಲ್ಲ. ಕೌಶಲವುಳ್ಳ ಡ್ರೈವರ್, ಹೆಲ್ಪರ್ ಕೊರತೆಯಿದ್ದು ವೇತನ ಹೆಚ್ಚಳವಾಗಿದೆ. ಯಂತ್ರದ ಬಿಡಿ ಭಾಗಗಳ ಬೆಲೆ ದುಪ್ಪಟ್ಟಾಗಿದೆ. ಕೊಯ್ಲು ಯಂತ್ರದ ಬಾಡಿಗೆ ಗಂಟೆಗೆ 2800ರೂ.ಗಿಂತ ಕಡಿಮೆ ದರಕ್ಕೆ ಒದಗಿಸಲು ಸಾಧ್ಯವಿಲ್ಲ. ರೈತರು ಸಹ ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕೆಂದರು.

ರೈತರು ಮತ್ತು ಹಾರ್ವೇಸ್ಟರ್ ಮಧ್ಯೆ ಬಾಡಿಗೆ ಕುರಿತು ಒಮ್ಮತ ಮೂಡದ ಕಾರಣ ಉಭಯ ಸದಸ್ಯರು ಪರಸ್ಪರ ಚರ್ಚಿಸಿ ಬೆಲೆ ನಿರ್ಧರಿಸಿಕೊಳ್ಳುವಂತೆ ತಹಸೀಲ್ದಾರ್ ಎಸ್.ಶಿವರಾಜ, ಸಿರಗುಪ್ಪದ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ರೈತ ಸಂಘ (ಕಾರ್ತೀಕ್ ಬಣ)ದ ಪದಾಧಿಕಾರಿಗಳಾದ ವಿ.ನಾಗರಾಜ, ವಿ.ಲಿಂಗರಾಜ, ರೈತ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ ನಾಯಕ, ಕೃಷಿ ಅಧಿಕಾರಿ ಕೆ.ಸೋಮಶೇಖರ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ,ಪ್ರಮುಖರಾದ ಗಂಗಣ್ಣ, ಗೆಣಕಿಹಾಳ್ ಸೋಮಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net