

ವಿಜಯವಾಣಿ ಸುದ್ದಿಜಾಲ ಉಡುಪಿ
ಕಳೆದ ತಿಂಗಳು ಉಡುಪಿ-ಮಣಿಪಾಲ ರಸ್ತೆ ಮಾರ್ಗದ ಇಂದ್ರಾಳಿಯಲ್ಲಿ ಉದ್ಘಾಟನೆಗೊಂಡ ನಿಮಿತ್ತ ರೈಲ್ವೆ ಮೇಲ್ಸೇತುವೆಯ ಬಳಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಮಂಗಳವಾರ (ಅ.14) ಸಂಜೆ ಹರ್ಷೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಸಾರ್ವಜನಿಕರಿಗೆ ಜಿಲೇಬಿ ವಿತರಿಸಿದರು.
ಸಹಭಾಗಿತ್ವ ವಹಿಸಿದ್ದ ಉಡುಪಿಯ ಜಹಾಂಗೀರ್ ಭಟ್ಸ್ ಸ್ವೀಟ್ಸ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ನ ಸಿಹಿ ಖಾದ್ಯತಜ್ಞರು ಸ್ಥಳದಲ್ಲಿಯೇ 4 ಸಾವಿರಕ್ಕೂ ಅಧಿಕ ಜಿಲೇಬಿ ತಯಾರಿಸಿದರು. ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಜಿಲೇಬಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಡಿವೈಎಸ್ಪಿ ಡಿ.ಟಿ. ಪ್ರಭು, ನಾಗರಿಕ ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ, 80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಸಮಿತಿಯ ಕಾರ್ಯಕರ್ತರಾದ ಕೆ.ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು, ಸತೀಶಕುಮಾರ್, ಯಾದವ್, ಜಯಶ್ರೀ, ಅಶ್ವಿನಿ, ಪ್ರಶಾದ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
ಪೇಜಾವರ ವಿಶ್ವಪ್ರಸನ್ನ ಶ್ರೀ ಮಾತನಾಡಿ, ಇಂದ್ರಾಳಿಯಲ್ಲಿ ಹೊಸ ಮಾದರಿಯ ಮೇಲ್ಸೇತುವೆ ಲೋಕಾರ್ಪಣೆಗೊಂಡಿದ್ದರಿಂದ ವಾಹನ ಸವಾರರ ಪರದಾಟಕ್ಕೆ ಮುಕ್ತಿ ಸಿಕ್ಕಂತಾಗಿದೆ. ಇದು ಹರ್ಷದಾಯಕ ಸಂಗತಿ. ಆದರೆ, ಸೇತುವೆಯ ಪಕ್ಕದಲ್ಲೇ ವಿದ್ಯಾ ಸಂಸ್ಥೆಯಿದ್ದು, ವಿದ್ಯಾರ್ಥಿಗಳಿಗೆ ವಾಹನಗಳ ಸಂಚಾರದಿಂದಾಗಿ ಹೆದ್ದಾರಿ ದಾಟಲು ಅಪಾಯ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಸೂಕ್ತ ಮಾರ್ಗದ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.