

ಮಂಡ್ಯ: ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್ ಅವರ ಪುತ್ರ ಕೆ.ಎಂ.ಹರ್ಷ ಅವರ ಪ್ರಥಮ ವರ್ಷದ ಪುಣ್ಯ ಸಂಸ್ಕರಣೆ ಅಂಗವಾಗಿ ನ.4ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಶ್ರಮಿಕ ವರ್ಗದ ನಾಟಿ ಹಾಕುವ ಮತ್ತು ಪೌರಕಾರ್ಮಿಕ ಮಹಿಳೆಯರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹರ್ಷ ಸಮಾಜಸೇವಾ ಫೌಂಡೇಷನ್ ಸಂಚಾಲಕ ದೇವರಾಜ್ ಕೊಪ್ಪ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಪೌರಕಾರ್ಮಿಕರ ಮಕ್ಕಳಿಗೆ ನೋಟ್‌ಪುಸ್ತಕ ವಿತರಣೆ ಹಾಗೂ ಐವರು ಮಕ್ಕಳಿಗೆ ಶಾಲಾ ಶುಲ್ಕಕ್ಕಾಗಿ ತಲಾ ಮೂರು ಸಾವಿರ ರೂ ಪ್ರೋತ್ಸಾಹಧನ ವಿತರಣೆ ಹಾಗೂ ತಾಲೂಕು ಜಾನಪದ ಪರಿಷತ್ ಗಾಯಕರಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರಗೌಡ ಸಮಾರಂಭ ಉದ್ಘಾಟಿಸಲಿದ್ದು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮತ್ತು ಅಭಿನವ ಭಾರತಿ ವಿದ್ಯಾಕೇಂದ್ರದ ಮುಖ್ಯಸ್ಥ ಶಿವಮೂರ್ತಿ ಕೀಲಾರ ಅವರು ಬಡ ಮಕ್ಕಳಿಗೆ ನೋಟ್‌ಪುಸ್ತಕ ಹಾಗೂ ಪ್ರೋತ್ಸಾಹ ಧನ ವಿತರಣೆ ಮಾಡುವರು. ಇದೇ ವೇಳೆ ಪಿ.ಕೆ.ಕಾಲನಿಯ ಸತ್ಯಮ್ಮ, ಪೂವತ್ತಮ್ಮ, ಆರ್‌ಟಿಒ ಶ್ರಮಿಕನಗರದ ಜಯಮ್ಮ, ಹನಿಯಂಬಾಡಿ ಹುಚ್ಚಮ್ಮ, ಹಳುವಾಡಿ ಮಹದೇವಮ್ಮ, ಮಲ್ಲನಾಯಕನಕಟ್ಟಿ ಸಾಕಮ್ಮ, ಕಾರಸವಾಡಿ ಕಮಲಮ್ಮ, ಸುಂದರಮ್ಮ, ಮಂಗಲ ಲಕ್ಷ್ಮಮ್ಮ ಹಾಗೂ ತಗ್ಗಹಳ್ಳಿ ಶಾಂತಮ್ಮ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಫೌಂಡೇಷನ್ ಸಂಚಾಲಕರಾದ ಗುಣಶೇಖರ್, ಪುಟ್ಟಸ್ವಾಮಿ, ಮಂಜೇಶ್, ಧನಂಜಯ ಇದ್ದರು.