ಹರ್ಷ ಕೊಲೆ ಪ್ರಕರಣದ ತನಿಖೆ ಹೊಣೆ ಸದ್ಯದಲ್ಲೇ ಎನ್​ಐಎಗೆ ಹಸ್ತಾಂತರ?

Shobha
Published on

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸದ್ಯದಲ್ಲೇ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ಕುರಿತ ಮಾಹಿತಿಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಂಚಿಕೊಂಡಿದ್ದಾರೆ.

ಸೀಗೆಹಟ್ಟಿಯ ಹರ್ಷನ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಇನ್ನೊಂದು ವಾರದೊಳಗೆ ಎನ್​ಐಎಗೆ ವಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಕೊಲೆಯಾದ ಮೊದಲ ದಿನವೇ ಎನ್​ಐಎಗೆ ವಹಿಸುವಂತೆ ಆಗ್ರಹಿಸಿದ್ದೆ. ಅದರಂತೆ ರಾಜ್ಯ ಸರ್ಕಾರ ಪ್ರಕರಣವನ್ನು ಯುಎಪಿಎ (ಅನ್​​ಲಾಪುಲ್ ಆ್ಯಕ್ಟಿವಿಟೀಸ್​ ಪ್ರಿವೆನ್ಷನ್ ಆ್ಯಕ್ಟ್) ಪ್ರಕಾರ ಕೇಸ್ ದಾಖಲಿಸಿದೆ. ಶೀಘ್ರವೇ ಎನ್​ಐಎಗೆ ಕೇಸ್ ಹಸ್ತಾಂತರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹರ್ಷನ ಸಾವು ಕೇವಲ ಅವರ ಮನೆಯವರಿಗೆ ದುಃಖ ತರಿಸಿಲ್ಲ. ಇಡೀ ಹಿಂದೂ ಸಮಾಜ, ದೇಶಕ್ಕೆ ದುಃಖ ಕೊಟ್ಟಿದೆ. ಪೈಶಾಚಿಕ ಕೃತ್ಯ ಕೇವಲ ಹರ್ಷನ ಹತ್ಯೆಗೆ ಸೀಮಿತವಾಗಿಲ್ಲ. ಈ ಹಿಂದೆ ಮಂಗಳೂರಿನಲ್ಲಿ ದೀಪಕ್ ಸಿಂಗ್, ಮೈಸೂರಿನಲ್ಲಿ ರಾಜು ಹಾಗೂ ಬೆಂಗಳೂರಿನ ರುದ್ರೇಶ್ ಸೇರಿ 23 ಯುವಕರನ್ನು ಕಳೆದುಕೊಂಡಿದ್ದೇವೆ. ರುದ್ರೇಶ್ ಹತ್ಯೆ ಹಿಂದೆ ಪಿಎಫ್​​ಐ ಸಂಘಟನೆ ಕೈವಾಡ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.

ಹರ್ಷನ ಕೊಲೆ ಹಿಂದೆ ಯಾವ ಸಂಘಟನೆ‌ ಇದೆ, ಅದಕ್ಕೆ ಎಲ್ಲಿಂದ ಹಣಕಾಸಿನ ನೆರವು ಆಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಕೇಸ್ ಕೇಂದ್ರಕ್ಕೆ ಶಿಫಾರಸು ಆಗುತ್ತಿದ್ದಂತೆ ಎನ್​ಐಎ ತನಿಖೆ ಶುರುವಾಗಲಿದೆ ಎಂದರು.

ಕೊಲೆಗೈದು ವಿಡಿಯೋ ಮಾಡುವ ಸಂಸ್ಕೃತಿ ಭಾರತದ್ದಲ್ಲ. ಅದು ತಾಲಿಬಾಲ್ ಸಂಸ್ಕೃತಿಯಾಗಿದೆ. ಅಂತಹ ಕ್ರೂರತೆ ಮೆರೆಯುವುದು ತಾಲಿಬಾನ್​ನಿಂದ ಮಾತ್ರ ಸಾಧ್ಯ ಎಂದ ಅವರು, ಹರ್ಷ ಹತ್ಯೆ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇದೆ. ಬಹಳ ದೊಡ್ಡ ಸಂಘಟನೆಗಳ ಕೈವಾಡವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net